ಬೆಂಗಳೂರು : ಕೋಳಿ ಸಾಕಾಣಿಕೆ ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬುಧವಾರ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು.

ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವೆಂಕಟರೆಡ್ಡಿ, ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದ್ದರೂ ರೈತರಿಗೆ ನ್ಯಾಯಯುತ ಸಾಕಾಣಿಕೆ ದರ ದೊರೆಯುತ್ತಿಲ್ಲ. ಇಂಟಿಗ್ರೇಷನ್ ಕಂಪೆನಿಗಳ ಶೋಷಣೆ ಮತ್ತು ಸರಕಾರದ ನಿರ್ಲಕ್ಷ್ಯದಿಂದಾಗಿ ರೈತರು ಹಲವು ವರ್ಷಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅನೇಕರು ತಮ್ಮ ಬಂಡವಾಳ ಕಳೆದುಕೊಂಡು ಬ್ಯಾಂಕ್ ಸಾಲ ಮರುಪಾವತಿಸಲಾಗದ ಸ್ಥಿತಿಗೆ ತಲುಪಿದ್ದಾರೆ ಎಂದರು.

ರಾಜ್ಯದಲ್ಲಿ ಸುಮಾರು 25 ಸಾವಿರ ಕೋಳಿ ಸಾಕಾಣಿಕೆ ರೈತರು, ಒಂದು ಲಕ್ಷಕ್ಕೂ ಅಧಿಕ ಕೃಷಿ ಕಾರ್ಮಿಕರು, ಸಾವಿರಾರು ಮಾಂಸದ ಅಂಗಡಿ ಮಾಲಕರು ಹಾಗೂ ಈ ಕ್ಷೇತ್ರವನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರಿದ್ದಾರೆ. ಇಷ್ಟೊಂ ದು ದೊಡ್ಡ ಉದ್ಯಮವಾಗಿದ್ದರೂ ಕ್ಷೇತ್ರದ ವಹಿವಾಟು, ರೈತರು ಮತ್ತು ಕಂಪೆನಿಗಳ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಗಳು ಸರಕಾರದ ಬಳಿ ಇಲ್ಲದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ವೆಂಕಟರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಸಂಘದ ಗೌರವಾಧ್ಯಕ್ಷ ಟಿ.ಯಶವಂತ ಮಾತನಾಡಿ, ರೈತರ ಹೋರಾಟದ ಫಲವಾಗಿ 2021ರಲ್ಲಿ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆಗೆ ಕನಿಷ್ಠ 6.20ರೂ. ನಿಗದಿಪಡಿಸಲಾಗಿತ್ತು. ಬಳಿಕ ಗ್ರೋಯಿಂಗ್ ಚಾರ್ಜಸ್ ರೂಪದಲ್ಲಿ ಪ್ರತಿ ಕೆ.ಜಿಗೆ 10 ರೂ. ನಿಗದಿಪಡಿಸಿ ಪಶುಸಂಗೋಪನಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಹೊರಡಿಸಿದ ಏಳು ತಿಂಗಳಾದರೂ ಇಂಟಿಗ್ರೇಷನ್ ಕಂಪೆನಿಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ. ಸರಕಾರವೂ ಕಂಪೆನಿಗಳಿಗೆ ಸೂಕ್ತ ನಿರ್ದೇಶನ ನೀಡಿಲ್ಲ. ಇದರಿಂದ ರೈತರಿಗೆ ಅನ್ಯಾಯ ಮುಂದುವರಿದಿದೆ ಎಂದು ಆರೋಪಿಸಿದರು.

ಪ್ರಸ್ತುತ ಕೋಳಿ ಸಾಕಾಣಿಕೆಯ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಿದ್ದು, ರೈತರು ಅನುಭವಿಸುತ್ತಿರುವ ನಷ್ಟವನ್ನು ಪರಿಗಣಿಸಿ ಕನಿಷ್ಠ ಸಾಕಾಣಿಕೆ ದರವನ್ನು ಪ್ರತಿ ಕೆ.ಜಿಗೆ 20 ರೂ.ಗೆ ಹೆಚ್ಚಿಸಬೇಕು. ಸರಕಾರ ನಿಗದಿಪಡಿಸಿರುವ ಕನಿಷ್ಠ ದರವನ್ನು ಇಂಟಿಗ್ರೇಷನ್ ಕಂಪೆನಿಗಳು ಕಡ್ಡಾಯವಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಬೇಕು. ಪ್ರತಿ ವರ್ಷ ಕನಿಷ್ಠ ಶೇ.10ರಷ್ಟು ಸಾಕಾಣಿಕೆ ವೆಚ್ಚವನ್ನು ಹೆಚ್ಚಿಸಬೇಕು ಎಂದು ಯಶವಂತ ಒತ್ತಾಯಿಸಿದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯ ಸರಕಾರ ನಿಗದಿಪಡಿಸಿರುವ ಕನಿಷ್ಠ ಕೋಳಿ ಸಾಕಾಣಿಕೆ ದರವನ್ನು ಇಂಟಿಗ್ರೇಷನ್ ಕಂಪೆನಿಗಳು ಕಡ್ಡಾಯವಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಬೇಕು. ಪ್ರತಿ ವರ್ಷ ಕನಿಷ್ಠ ಶೇ.10ರಷ್ಟು ಸಾಕಾಣಿಕೆ ವೆಚ್ಚವನ್ನು ಹೆಚ್ಚಿಸಬೇಕು. ಕುಕ್ಕುಟ ನಿಯಂತ್ರಣ ಹಾಗೂ ಅಭಿವೃದ್ಧಿ ಮಸೂದೆ-2022 ಅನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಬೇಕು. ಕೋಳಿ ಸಾಕಾಣಿಕೆಯನ್ನು ಕೃಷಿ ಚಟುವಟಿಕೆಯೆಂದು ಪರಿಗಣಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 95(1)(ಎ)ಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಕೆಎಂಎಫ್ ಮಾದರಿಯಲ್ಲಿ ಸಹಕಾರಿ ಕ್ಷೇತ್ರದಡಿ ಕೋಳಿ ಸಾಕಾಣಿಕೆ ಉದ್ಯಮವನ್ನು ಅಭಿವೃದ್ಧಿಪಡಿಸಿ, ಕಾರ್ಪೊ ರೇಟ್ ಕಂಪೆನಿಗಳ ಶೋಷಣೆಯನ್ನು ನಿಯಂತ್ರಿಸಬೇಕು. ಕೋಳಿ ಸಾಕಾಣಿಕೆ ರೈತರಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳು, ಸಹಾಯಧನ ಹಾಗೂ ಸುಲಭ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ರೈತರಿಗೆ ಗುಣಮಟ್ಟದ ಕೋಳಿ ಮರಿಗಳು, ಗುಣಮಟ್ಟದ ಕೋಳಿ ಆಹಾರ ಹಾಗೂ ಉತ್ತಮ ಔಷಧಗಳನ್ನು ಒದಗಿಸುವುದನ್ನು ಖಾತರಿಪಡಿಸಬೇಕು. ಔಷಧ ಮತ್ತಿತರ ವೆಚ್ಚಗಳ ಹೊರೆಯನ್ನು ರೈತರ ಮೇಲೆ ಹೇರದಂತೆ ಕಂಪೆನಿಗಳ ಮೇಲೆ ಸೂಕ್ತ ನಿಯಂತ್ರಣ ವಿಧಿಸಬೇಕು ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಹೋರಾಟದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೆಡ್ಡಿ, ರೈತ ಹೋರಾಟಗಾರರಾದ ಯು. ಬಸವರಾಜು, ಡಾ.ಆಂಜನಪ್ಪ, ಚಂದ್ರಶೇಖರ್, ಮಾರಣ್ಣ, ಧನಂಜಯ್ ಡಿ.ಡಿ., ರಾಜ್ ಕುಮಾರ್, ನಿತಿನ್, ಸುಧಾಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್/ವಾರ್ತಾಭಾರತಿ

ಬೆಂಗಳೂರು ವರದಿಗಾರರು