Bengaluru | ಸರಾಯಿಪಾಳ್ಯದಲ್ಲಿ ಬುಲ್ಡೋಝರ್ ಕಾರ್ಯಾಚರಣೆ ನಡೆಸಿ ಮನೆಗಳನ್ನು ಕೆಡವಿದ ಬಿಡಿಎ
ಯಾವುದೇ ನೋಟಿಸ್ ನೀಡದೆ ಕ್ರಮ ಕೈಗೊಳ್ಳಲಾಗಿದೆ : ಸ್ಥಳೀಯರ ಆರೋಪ
Screengrab : x/@zoo_bear
ಬೆಂಗಳೂರು : ಸರಾಯಿಪಾಳ್ಯದಲ್ಲಿ ಬೆಳ್ಳಂಬೆಳಿಗ್ಗೆ ಬಿಡಿಎ ಯಾವುದೇ ನೋಟಿಸ್ ನೀಡದೆ ಏಕಾಏಕಿ ಬುಲ್ಡೋಝರ್ ಕಾರ್ಯಾಚರಣೆ ನಡೆಸಿ ಮನೆಗಳನ್ನು ಧ್ವಂಸ ಮಾಡಿರುವ ಆರೋಪ ಕೇಳಿ ಬಂದಿದೆ.
ಬಿಡಿಎ ನಡೆಸಿದ ದಿಢೀರ್ ಒತ್ತುವರಿ ತೆರವು ಕಾರ್ಯಾಚರಣೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮನೆಗಳನ್ನು ತೆರವುಗೊಳಿಸುತ್ತಿರುವ ಬಗ್ಗೆ ನಮಗೆ ಯಾವುದೇ ನೋಟಿಸ್ ಅಥವಾ ಪೂರ್ವ ಸೂಚನೆಯನ್ನು ನೀಡಿಲ್ಲ. ಬೆಳಗಿನ ಜಾವ ಏಕಾಏಕಿ ಬಂದು ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತ ವೀಡಿಯೊ ಹಂಚಿಕೊಂಡ ಪತ್ರಕರ್ತ ಮುಹಮ್ಮದ್ ಝುಬೈರ್, "ಉತ್ತರ ಬೆಂಗಳೂರಿನ ಸರಾಯಿಪಾಲ್ಯದಲ್ಲಿ ಇಂದು ಮುಂಜಾನೆ ನಡೆದ ಧ್ವಂಸ ಕಾರ್ಯಾಚರಣೆ ಸ್ಥಳೀಯ ನಿವಾಸಿಗಳನ್ನು ತೀವ್ರವಾಗಿ ಕಂಗೆಡಿಸಿದೆ. ಬಿಡಿಎ ನಡೆಸಿದ ಈ ಧ್ವಂಸ ಕಾರ್ಯದಿಂದ ಅನೇಕ ಕುಟುಂಬಗಳು ದಿಕ್ಕು ಪಾಲಾಗಿದೆ. ಜನರು ನೋಟಿಸ್‌ಗಳನ್ನು ಅಲ್ಲ, ಜೆಸಿಬಿಗಳನ್ನು ನೋಡುತ್ತಾ ನಿದ್ರೆಯಿಂದ ಎದ್ದಿದ್ದಾರೆ. ಯಾವುದೇ ಪೂರ್ವ ಸೂಚನೆ ನೀಡಲಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಬೆಳಗಿನ ಜಾವ ಮನೆಗಳನ್ನು ಕೆಡವಲಾಗಿದೆ. ಮನೆಯ ಸಾಮಾಗ್ರಿಗಳನ್ನು ರಸ್ತೆಗಳಿಗೆ ಎಸೆಯಲಾಗಿದೆ. ಮಕ್ಕಳಿಗೆ ಆಹಾರವಿಲ್ಲ, ಹಾಲು ಕೂಡ ಸಿಗದ ಸ್ಥಿತಿಯಲ್ಲಿ ಕುಟುಂಬಗಳು ಎಲ್ಲಿಗೆ ಹೋಗಬೇಕು ಎಂಬುದನ್ನು ತಿಳಿಯದೆ ಅಲೆದಾಡುವಂತಾಗಿದೆ. ಇದೇನು ಕಾನೂನುಬದ್ಧ ತೆರವು ಕಾರ್ಯವೇ? ಕ್ರಮ ಅಗತ್ಯವಾಗಿದ್ದರೂ ಕೂಡ, ಜನರ ಜೀವನವನ್ನು ಒಂದೇ ರಾತ್ರಿಯಲ್ಲಿ ಅಸ್ತವ್ಯಸ್ತಗೊಳಿಸುವ ಬದಲು ಸರಕಾರ ಮಾನವೀಯತೆ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳಬೇಕಿರಲಿಲ್ಲವೇ? ಸಹಾನುಭೂತಿ ಇಲ್ಲದ ಆಡಳಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.