Bengaluru | ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಓಡಾಡುವವರ ಸುಲಿಗೆ: ಇಬ್ಬರು ಅಪ್ರಾಪ್ತರು ಸೇರಿ ಐವರ ಸೆರೆ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾತ್ರಿ ಸಮಯದಲ್ಲಿ ಓಡಾಡುವ ದ್ವಿಚಕ್ರವಾಹನ ಚಾಲಕರನ್ನು ಗುರಿಯಾಗಿಸಿ ಹಲ್ಲೆಗೈದು, ಸುಲಿಗೆ ಮಾಡಿದ ಆರೋಪದಡಿ ಇಬ್ಬರು ಅಪ್ರಾಪ್ತರು ಸೇರಿ ಐವರನ್ನು ಇಲ್ಲಿನ ರಾಮಮೂರ್ತಿನಗರ ಹಾಗೂ ಬಾಣಸವಾಡಿ ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಈ ಸಂಬಂಧ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬಾಣಸವಾಡಿ ಉಪ ವಿಭಾಗದ ಪೊಲೀಸರು ಆರೋಪಿಗಳಾದ ಮಿಥುನ್, ಸಾಹಸ್ ಹಾಗೂ ಸ್ವೀಫನ್ ರಾಜ್ ಎಂಬವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಮೂವರು ಬಾಣಸವಾಡಿ ಸುತ್ತಮುತ್ತಲಿನ ನಿವಾಸಿಗಳಾಗಿದ್ದು, ಡೆಲಿವರಿ ಬಾಯ್‍ಗಳಾಗಿ ಕೆಲಸ ಮಾಡುತ್ತಿದ್ದರು. ಹಣಕ್ಕಾಗಿ ಈ ಕೃತ್ಯವೆಸಗಿದ್ದಾರೆ. ಆರೋಪಿ ಮಿಥುನ್ ವಿರುದ್ಧ ಈ ಹಿಂದೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಮೇ 17ರಂದು 12.15ರ ಸುಮಾರಿಗೆ ಬರ್ಖಾತ್ ಎಂಬಾತ ಔಷಧ ತರಲು ಮೆಡಿಕಲ್ ಶಾಪ್‍ಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಡ್ಡಗಟ್ಟಿದ ಆರೋಪಿಗಳು ಏಕಾಏಕಿ ಕೈಯಿಂದ ಹಲ್ಲೆ ಮಾಡಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದರೂ ಹಲ್ಲೆ ಮುಂದುವರೆಸಿದ್ದರು. ಈ ವೇಳೆ ಬರ್ಖಾತ್ ಬಳಿಯಿದ್ದ 600 ರೂಪಾಯಿ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಕೆಲವೆ ಗಂಟೆಗಳಲ್ಲಿ ಅಂದರೆ ಬೆಳಗಿನ ಜಾವ 3.30ರ ಸುಮಾರಿಗೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ದ್ವಿಚಕ್ರವಾಹನ ಸವಾರನ ಮೇಲೆ ಹಲ್ಲೆ ಮಾಡಿದ್ದರು.