×
Ad

ಬೆಂಗಳೂರು | ನಕಲಿ ನೋಟುಗಳ ಮುದ್ರಣ ಪ್ರಕರಣ : ಆರೋಪಿ ಬಂಧನ

Update: 2025-06-13 18:15 IST

ಸಾಂದರ್ಭಿಕ ಚಿತ್ರ | PC:Meta AI

ಬೆಂಗಳೂರು : ಹೋಟೆಲ್ ರೂಮ್‍ವೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಣ ಮಾಡಿದ್ದ ಪ್ರಕರಣದಡಿ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಕ್ರಿಷ್‌ ಮಾಲಿ(23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ನಗರದ ಟಸ್ಕರ್ ಟೌನ್‍ನಲ್ಲಿರುವ ಹೋಟೆಲ್‍ನಲ್ಲಿ ಜೂ.1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ನಕಲಿ ನೋಟುಗಳನ್ನು ಮುದ್ರಣ ಮಾಡಿದ್ದ. ಅಲ್ಲದೇ ಜೂ.7ರಂದು ಹೋಟೆಲ್‍ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕವೇ ಬಿಲ್ ಪಾವತಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿರುವ ಕ್ರಿಷ್‌ ಮಾಲಿ, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಆನ್‍ಲೈನ್ ಮೂಲಕ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದ. ತನ್ನ ಬಳಿಯಿರುವ ಹಣ ಎಷ್ಟು ದಿನಗಳ ಕಾಲ ಸಾಲಬಹುದು ಎಂದು ಯೋಚಿಸಿದ್ದ ಆರೋಪಿ, ಅದಕ್ಕಾಗಿ ತಾನೇ ನಕಲಿ ನೋಟುಗಳನ್ನು ಪ್ರಿಂಟ್ ಮಾಡಲು ಯೋಚಿಸಿದ್ದ ಎನ್ನಲಾಗಿದೆ.

ಬ್ಯಾಗ್‍ನಲ್ಲಿ ಪ್ರಿಂಟರ್, ಸ್ಕ್ಯಾನರ್‍ಗಳನ್ನು ತಂದಿದ್ದ ಆರೋಪಿ ಹೋಟೆಲ್‍ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿದ್ದ. ಬಳಿಕ ಜೂ.7ರ ಮಧ್ಯಾಹ್ನ ಹೋಟೆಲ್‍ನಿಂದ ಚೆಕ್‍ಔಟ್ ಆಗುವಾಗ ನಕಲಿ ನೋಟುಗಳ ಮೂಲಕವೇ 3ಸಾವಿರ ರೂ. ಬಿಲ್ ಪಾವತಿಸಿ ತೆರಳಿದ್ದ. ಅದೇ ದಿನ ಬೆಳಗ್ಗೆ ಹೋಟೆಲ್‍ನಿಂದ ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿರುವುದನ್ನು ಪೌರಕಾರ್ಮಿಕ ಸಿಬ್ಬಂದಿ ಹೋಟೆಲ್ ಮ್ಯಾನೇಜರ್ ಬಳಿ ಹೇಳಿದ್ದರು.

ಆರೋಪಿಯು ಚೆಕ್‍ಔಟ್ ಆದ ಕೆಲ ಸಮಯದ ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಆತ ನೀಡಿದ್ದ ನೋಟುಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ತಿಳಿದು ಬಂದಿತ್ತು. ಬಳಿಕ ಆತ ತಂಗಿದ್ದ ರೂಮ್‍ನಲ್ಲಿ ಪರಿಶೀಲಿಸಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟ್‍ನ ಚೂರುಗಳು ಪತ್ತೆಯಾಗಿದ್ದವು. ನಂತರ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಶರೀಫ್ ಉದ್ದೀನ್ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.

ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಈ ರೀತಿಯ ನಕಲಿ ನೋಟುಗಳನ್ನು ಆರೋಪಿ ಬೇರೆ ಎಲ್ಲಿಯಾದರೂ ನೀಡಿದ್ದನಾ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News