ಬೆಂಗಳೂರು | ಅಗ್ನಿ ಅವಘಡದಲ್ಲಿ ಐವರು ಮೃತ್ಯು ಪ್ರಕರಣ; ಕಟ್ಟಡದ ಇಬ್ಬರು ಮಾಲಕರ ಬಂಧನ
ಬೆಂಗಳೂರು, ಆ.17 : ಇಲ್ಲಿನ ನಗರತ್ ಪೇಟೆಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಆ.16ರ ಶನಿವಾರ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಸಂಬಂಧ ಕಟ್ಟಡದ ಇಬ್ಬರು ಮಾಲಕರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗೋಪಾಲ್ ಸಿಂಗ್ ಎಂಬವರು ನೀಡಿದ ದೂರಿನನ್ವಯ ಹಲಸೂರು ಗೇಟ್ ಠಾಣೆಯಲ್ಲಿ ಬಿಎನ್‍ಎಸ್ ಸೆಕ್ಷನ್ 105 3(5), 324(5)ರ ಅಡಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲಕರಾದ ಬಾಲಕೃಷ್ಣಯ್ಯ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ
ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ, ಕಟ್ಟಡದಲ್ಲಿ ಸೂಕ್ತ ರೀತಿಯ ಕಿಟಕಿ, ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಐವರ ಸಾವಿಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆ.16ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್ ಪೇಟೆಯ ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿದ್ದ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ರಾಜಸ್ಥಾನ ಮೂಲದ ಮದನ್ ಕುಮಾರ್(36), ಅವರ ಪತ್ನಿ ಸಂಗೀತಾ(33), ಮಕ್ಕಳಾದ ಮಿಥೇಶ್(8), ವಿಹಾನ್(5) ಹಾಗೂ ಪಕ್ಕದ ಮನೆಯಲ್ಲಿದ್ದ ಸುರೇಶ್(30) ಎಂಬವರು ಮೃತಪಟ್ಟಿದ್ದರು.