×
Ad

Bengaluru | ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ; ಓರ್ವ ಮಹಿಳೆ ಸಹಿತ ಮೂವರ ಬಂಧನ

Update: 2025-11-29 19:16 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನ.23ರಂದು ನೆಲಮಂಗಲದ ಗಂಗೊಂಡನಹಳ್ಳಿ ಬಳಿ ಘಟನೆ ನಡೆದಿದೆ. ಯಾದಗಿರಿ ಮೂಲದ ಬಸವರಾಜು(28) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣ ಸಂಬಂಧ ಬಸವರಾಜು ಪತ್ನಿ ಶರಣಮ್ಮ(25), ಪ್ರಿಯಕರ ವೀರಭದ್ರ(19) ಮತ್ತು ಅನಿಲ್ ಎಂಬಾತನನ್ನು ಬಂಧಿಸಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತಿಯನ್ನೇ ಪತ್ನಿ ಕೊಲೆ ಮಾಡಿಸಿರುವುವುದಾಗಿ ತನಿಖೆ ವೇಳೆ ಬಯಲಾಗಿದೆ.

ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಿರ್ಮಾಣ ಮೇಲ್ವಿಚಾರಕ ವೀರಭದ್ರ ಹಾಗೂ ಆತನ ಸ್ನೇಹಿತ ಅನಿಲ್ ಇತರ ಆರೋಪಿಗಳಾಗಿದ್ದಾರೆ. ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಶರಣಮ್ಮ ಮತ್ತು ವೀರಭದ್ರ ನಡುವೆ ಸಂಬಂಧವಿತ್ತು. ಆಕೆಯ ಪತಿಗೆ ಇದು ತಿಳಿದಾಗ, ವೀರಭದ್ರನಿಂದ ದೂರವಿರಲು ಎಚ್ಚರಿಸಿದರು. ಇದರಿಂದ ಕೋಪಗೊಂಡ ಶರಣಮ್ಮ ಮತ್ತು ವೀರಭದ್ರ ಬಸವರಾಜು ಅವರನ್ನು ಕೊಲ್ಲಲು ಯೋಜಿಸಿದ್ದರು ಎನ್ನಲಾಗಿದೆ.

ನ.23ರಂದು ಬಸವರಾಜು ಕುಡಿದ ಮತ್ತಿನಲ್ಲಿದ್ದಾಗ, ಶರಣಮ್ಮ ವೀರಭದ್ರನನ್ನು ಮನೆಗೆ ಕರೆದಿದ್ದಾಳೆ. ನಂತರ ಆತನ ಮೇಲೆ ಹಲ್ಲೆ ನಡೆಸಿ, ಕಲ್ಲಿನಿಂದ ತಲೆಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದೆ. ನಂತರ ಅನಿಲ್‍ಗೆ ಕರೆ ಮಾಡಿ ಬಸವರಾಜುನ ಮೃತದೇಹವನ್ನು ಕಾರಿನಲ್ಲಿ ಗಂಗೊಂಡನಹಳ್ಳಿಗೆ ಸಾಗಿಸಿದ್ದಾರೆ. ಸಾಕ್ಷಿ ನಾಶಮಾಡಲು ಅವರು ಪೆಟ್ರೋಲ್ ಸುರಿದು, ದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News