Bengaluru | ಐಷಾರಾಮಿ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಬೆಂಗಳೂರು : ಇಲ್ಲಿನ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಐಷಾರಾಮಿ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ವಿರಾಜಪೇಟೆಯವರಾದ ಸಲೀಂ ಅಕ್ಬರ್ (46) ಎಂದು ಗುರುತಿಸಲಾಗಿದೆ.
ಪೊಲೀಸ್ ಠಾಣೆಯ ಮುಂಭಾಗದಲ್ಲೇ ಇರುವ ಹೋಟೆಲ್‌ವೊಂದರ ಮುಂಭಾಗದಲ್ಲಿ ನಿಂತಿದ್ದ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ. ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಠಾಣೆ ಎದುರಿನ ಹೋಟೆಲ್ ಬಳಿ ಕಾರು ಬಂದು ನಿಂತಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಗಮನಿಸಿದಾಗ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕೋರಮಂಗಲ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ಚಾಲನೆ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.