ಸಿಎಸ್ಐ ಕರ್ನಾಟಕದ ಬಿಷಪ್ ಗಳ ನಿಯೋಗದಿಂದ ಮುಖ್ಯಮಂತ್ರಿಯ ಭೇಟಿ: ಮತಾಂತರ ನಿಷೇಧ ಕಾಯ್ದೆ ರದ್ದತಿಗೆ ಆಗ್ರಹ
ಮತಾಂತರ ನಿಷೇಧ ಕಾಯ್ದೆ ರದ್ದತಿಗೆ ಆಗ್ರಹ
2022ರಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಅಧಿನಿಯಮ( ಮತಾಂತರ ನಿಷೇಧ ಕಾಯ್ದೆ)ವನ್ನು ರದ್ದುಗೊಳಿಸುವಂತೆ ನಿಯೋಗವು ಒತ್ತಾಯಿಸಿದೆ.
ಮತಾಂತರ ನಿಷೇದ ಕಾಯ್ದೆ ಜಾರಿಗೆ ತರುವುದನ್ನು ವಿರೋಧಿಸಿ ಎಲ್ಲ ಕ್ರೈಸ್ತ ಸಮುದಾಯದವರನ್ನು ಒಳಗೊಂಡು ಭಾರತೀಯ ಕ್ರೈಸ್ತ ಒಕ್ಕೂಟದ ವತಿಯಿಂದ ಅಂದಿನ ಬೆಳಗಾವಿ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಒಂದು ದಿನದ ಉಪವಾಸ ಧರಣಿ ಮಾಡಲಾಗಿತ್ತು. ಆ ವೇಳೆ ಅಂದಿನ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರತಿಪಕ್ಷ ನಾಯಕರು, 'ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಈ ಕರಾಳ ಅಧಿನಿಯಮವನ್ನು ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಇದೀಗ 3 ವರ್ಷಗಳು ಕಳದರೂ ಈ ಅಧಿನಿಯಮವನ್ನು ರದ್ದುಪಡಿಸಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ನಿಯೋಗವು ಆಗ್ರಹಿಸಿದೆ.
ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ವೇಳೆ ನೀಡಿರುವ 250 ಕೋಟಿ ರೂ. ಅನುಧಾನದ ಭರವಸೆಯಲ್ಲಿ ಕೇವಲ 85 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಿಂದ ಕ್ರೈಸ್ತ ಸಮುದಾಯದ ಬಡವರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಒಟ್ಟು 250 ಕೋಟಿ ಒದಗಿಸಿಕೊಡುವಂತೆ ನಿಯೋಗ ಮನವಿ ಮಾಡಿದೆ.
ಪ್ರೊಟೆಸ್ಟೆಂಟ್ ಸಮುದಾಯದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗ ಬೆಂಗಳೂರಿನ ಅಡಗೋಡಿ ಮತ್ತು ಮೈಸೂರು ರಸ್ತೆಯಲ್ಲಿರುವ ಸಮಾಧಿಗಳು ಬಹುತೇಕ ತುಂಬಿದೆ. ಆದ್ದರಿಂದ ಸರಕಾರದ ವತಿಯಿಂದ ಪರ್ಯಾಯವಾಗಿ ಉತ್ತರ ಬೆಂಗಳೂರಿನ ಕಡೆಯಲ್ಲಿ ಯಲಹಂಕ ಅಥವಾ ದೇವನಹಳ್ಳಿಯ ಬಳಿಯಲ್ಲಿ ಐದು ಎಕರೆ ಜಮೀನು ನೀಡುವಂತೆ ನಿಯೋಗವು ಕೋರಿಕೆ ಸಲ್ಲಿಸಿದೆ.
ನಿಯೋಗದ ಮನವಿಗೆ ಸ್ಪಂದಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮುಂದಿನ ಅಧಿವೇಶನದಲ್ಲಿ ಮತಾಂತರ ನಿಷೇದ ಕಾಯ್ದೆಯನ್ನು ರದ್ದು ಪಡಿಸುವ ಭರವಸೆ ನೀಡಿದ್ದಾರೆ ಎಂದು ನಿಯೋಗ ತಿಳಿಸಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಎಸ್ಐ ಕರ್ನಾಟಕ ದಕ್ಷಿಣ ಡಯಾಸಿಸ್, ಮಂಗಳೂರು ಇದರ ಬಿಷಪ್ ರೈಟ್ ರೆವ. ಹೇಮಚಂದ್ರ ಕುಮಾರ್, ಸಿಎಸ್ಐ ಕರ್ನಾಟಕ ಸೆಂಟ್ರಲ್ ಡಯಾಸಿಸ್, ಬೆಂಗಳೂರು ಇದರ ಬಿಷಪ್ ರೈಟ್ ರೆವ.ವಿನ್ಸಂಟ್ ವಿನೋದ ಕುಮಾರ್, ಸಿಎಸ್ಐ ಕರ್ನಾಟಕ ಉತ್ತರ ಡಯಾಸಿಸ್, ಧಾರವಾಡ ಇದರ ಬಿಷಪ್ ರೈಟ್ ರೆವ. ಮಾರ್ಟಿನ್ ಬೋರ್ಗಾವಿ, ವಕ್ತಾರರು ಕರ್ನಾಟಕ ರಾಜ್ಯ ಪೆಂಟಕೊಸ್ಟಲ್ ಚರ್ಚ್ಸ್, ಬೆಂಗಳೂರು ಇದರ ವಕ್ತಾರ ರೆ.ಫಾ.ರವಿ ಮಣಿ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ ಜತ್ತನ್ನ, ಉಪಾಧ್ಯಕ್ಷ ಡಾ.ಪ್ರದೀಪ್ ಡಿ ಮೆಲ್ಲೊ ಮತ್ತು ಪ್ರಧಾನ ಕಾರ್ಯದರ್ಶಿ ಪೀಟರ್ ದಾಂತಿಯವರಿದ್ದರು.