×
Ad

ಮೆಟ್ರೋ ಪ್ರಯಾಣ ದರ ಹೆಚ್ಚಳ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2025-02-06 20:29 IST

ಡಿಸಿಎಂ ಡಿ.ಕೆ.ಶಿವಕುಮಾರ್ 

ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬಿಎಂಆರ್‍ಸಿಎಲ್ ತೀರ್ಮಾನ ಮಾಡುತ್ತದೆ. ಇದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ರಾಜ್ಯ ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಗುರುವಾರ ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದ ಇಲಾಖೆಗಳು, ಪ್ರಾಧಿಕಾರದ ಅಧಿಕಾರಿಗಳ ಜೊತೆ ನಗರ ಪ್ರದಕ್ಷಿಣೆ ನಡೆಸಿದ ನಂತರ ಬಿಎಂಆರ್‍ಸಿಎಲ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ: ಕುಡಿಯುವ ನೀರಿನ ದರ ಏರಿಕೆ ವಿಚಾರವನ್ನು ಸಚಿವ ಸಂಪುಟದ ಮುಂದೆ ಇಡಲಾಗುವುದು. ನೀರಿನ ದರ ಏರಿಕೆಯಾಗಿ 14 ವರ್ಷಗಳಾಗಿದೆ. ಬೆಂಗಳೂರು ಜಲ ಮಂಡಳಿಗೆ ವರ್ಷಕ್ಕೆ 1 ಸಾವಿರ ಕೋಟಿ ರೂ.ನಷ್ಟವಾಗುತ್ತಿದೆ. ಇದಕ್ಕಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಹೆಬ್ಬಾಳ, ಗೊರಗುಂಟೆಪಾಳ್ಯ, ಬಿಇಎಲ್ ಕಡೆಯ ರಸ್ತೆ, ಲೊಟ್ಟೆಗೊಲ್ಲಹಳ್ಳಿ, ಸುಮ್ಮನಹಳ್ಳಿ ಭಾಗದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಎಂಆರ್‍ಸಿಎಲ್, ಬಿಡಿಎ ಆಯುಕ್ತರು ಒಟ್ಟಿಗೆ ನಗರ ಪ್ರದಕ್ಷಿಣೆ ಹಾಕಿ ಸಂಚಾರ ದಟ್ಟನೆ ಹೆಚ್ಚಿರುವ ಕಡೆ ಅನುಕೂಲವಾಗುವಂತೆ ಎಲ್ಲೆಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ ಗಳು, ಸುರಂಗ ರಸ್ತೆಗಳು ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

ಭವಿಷ್ಯದಲ್ಲಿ ಮೆಟ್ರೋ ನಿಲ್ದಾಣಗಳು ಇರುವ ಕಡೆ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರು ಅನೇಕ ಕಡೆ ರಸ್ತೆ ಬದಿ, ಖಾಸಗಿ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಿ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ. ಮೂರನೇ ಹಂತದ ಮೆಟ್ರೋ ಮಾರ್ಗ ಅನುಷ್ಠಾನದ ವೇಳೆ ಡಬಲ್ ಡೆಕ್ಕರ್ ವ್ಯವಸ್ಥೆ ಇರಲೇಬೇಕು ಎನ್ನುವ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮೆಟ್ರೋ ಪಿಲ್ಲರ್ ಗಳಲ್ಲಿ ಜಾಹೀರಾತಿಗೆ ಅವಕಾಶ: ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ನಗರವನ್ನು ಸೌಂದರ್ಯೀಕರಣ ಮಾಡುವ ಸಲುವಾಗಿ ಬಿಬಿಎಂಪಿ, ಬಿಎಂಆರ್ ಸಿಎಲ್ ಒಟ್ಟಿಗೆ ಸೇರಿ ತೀರ್ಮಾನ ಮಾಡಬೇಕು. ಮೆಟ್ರೋ ಪಿಲ್ಲರ್ ಗಳಲ್ಲಿ ಜಾಹೀರಾತಿಗೆ ಅವಕಾಶ ಮಾಡಿಕೊಡಬೇಕು. ಎರಡೂ ಸಂಸ್ಥೆಗಳು ಶೇ.50:50 ಅನುಪಾತದಲ್ಲಿ ಕೆಲಸ ಮಾಡಬೇಕು, ಆದಾಯವನ್ನು ಇದೇ ಮಾದರಿಯಲ್ಲಿ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಹೆಬ್ಬಾಳ ಮೇಲ್ಸೆತುವೆ ಬಳಿ ಇರುವ ಬಿಡಿಎ ಜಾಗದಲ್ಲಿ ಪರ್ಯಾಯ ರಸ್ತೆ ಮಾಡಲಾಗುತ್ತಿದೆ. ಇದು ಎಪ್ರಿಲ್ 30 ಕ್ಕೆ ಕಾಮಗಾರಿ ಮುಗಿಸಬೇಕು ಮೇ ಹೊತ್ತಿಗೆ ಉದ್ಘಾಟನೆಯಾಗಬೇಕು ಎಂದು ಸೂಚಿಸಲಾಗಿದೆ. ಈ ಕಾರಣಕ್ಕೆ ಗುತ್ತಿಗೆದಾರರನ್ನು ಕರೆಸಿ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ತುಮಕೂರಿನಿಂದ ಕೆ.ಆರ್.ಪುರಂಗೆ ಹೋಗುವ ರಸ್ತೆ ಬಳಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಅಂಡರ್ ಪಾಸ್ ನಿರ್ಮಾಣಕ್ಕೆ ಬಿಡಿಎ, ಮೆಟ್ರೋ, ಬಿಬಿಎಂಪಿ ಸೇರಿ ಅಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಈ ಕಾಮಗಾರಿಯನ್ನು ಬಿಡಿಎ ನಿರ್ವಹಿಸಲಿದೆ. ರಾಜ್ಯ ಬಜೆಟ್ ಇರುವ ಕಾರಣಕ್ಕೆ ಬೆಂಗಳೂರು ಅಭಿವೃದ್ದಿ ಹಾಗೂ ನೀರಾವರಿ ಇಲಾಖೆಗೆ ಬೇಕಾದ ಅನುದಾನಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಶುಕ್ರವಾರ ಮುಖ್ಯಮಂತ್ರಿಗೆ ವರದಿ ನೀಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಡಬಲ್ ಡೆಕ್ಕರ್ ಮಾಡಲು ಹೆಚ್ಚುವರಿ 9,800 ಕೋಟಿ ರೂ. ವೆಚ್ಚವಾಗುತ್ತದೆ. ಈಗ ಪಶ್ಚಿಮ ಭಾಗದಲ್ಲಿ ಮಾತ್ರ ಮಾಡಲಾಗುತ್ತಿದೆ. ಈಗಾಗಲೇ ರಾಗಿಗುಡ್ಡ ಭಾಗದಲ್ಲಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದೇವೆ. ಇನ್ನೂ ಒಂದಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ಎಲ್ಲವನ್ನು ಬಗೆಹರಿಸಿ ಮುಂದುವರೆಯಲಾಗುವುದು ಎಂದು ಅವರು ತಿಳಿಸಿದರು.

ಎರಡನೇ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ. ನನಗೆ ಮತ್ತು ಮುಖ್ಯಮಂತ್ರಿಗೆ ವರದಿ ಸಲ್ಲಿಕೆಯಾಗುತ್ತದೆ. ಆನಂತರ ವಿಮಾನ ನಿಲ್ದಾಣ ಪ್ರಾಧಿಕಾರದ ಅಭಿಪ್ರಾಯ ಕೇಳಲಾಗುವುದು. ಅವರ ತೀರ್ಮಾನದ ನಂತರ ಮಾಹಿತಿ ನೀಡಲಾಗುವುದು. ಬಿಡದಿ ಬಳಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ಗ್ರೇಟರ್ ಬೆಂಗಳೂರು ವಿಚಾರಕ್ಕೆ ಸಂಬಂಧಿಸಿದಂತೆ ಬಿಡದಿ ಬಳಿ ಟೌನ್‍ಶಿಪ್ ನಿರ್ಮಾಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈಗಾಗಲೇ, ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಪಡೆಯಲು ಆಹ್ವಾನ ನೀಡಲಾಗಿದೆ. ಶಾಸಕ ರಿಝ್ವಾನ್ ಅರ್ಶದ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಶಾಸಕರ ಅಭಿಪ್ರಾಯ ಪಡೆಯಲಾಗಿದೆ. ಬೆಂಗಳೂರಿನ ಎಲ್ಲ ಶಾಸಕರ ಸಲಹೆ ಪಡೆಯಿರಿ ಎಂದು ಹೇಳಿದ್ದೇನೆ. ಮಾಧ್ಯಮಗಳ ಸಲಹೆಯನ್ನೂ ಪಡೆಯಲಾಗುವುದು’

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News