×
Ad

ಬೆಂಗಳೂರು: ಇಬ್ಬರು ಮಕ್ಕಳ ಹತ್ಯೆಗೈದು ಆತ್ಮಹತ್ಯೆ ಯತ್ನಿಸಿದ ತಾಯಿ?

Update: 2024-11-22 22:19 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆವೊಂದು ವರದಿಯಾಗಿದ್ದು, ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಶುಭಂ ಸಾಹು (7) ಹಾಗೂ ಶಿಯಾ ಸಾಹು (3) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.

ತಾಯಿಯು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ತಾಯಿ ಮಮತಾ ಸಾಹುಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ಮೂಲದ ಮಮತಾ ದಂಪತಿ ಕಳೆದ 6 ತಿಂಗಳಿಂದ ಸುಬ್ರಮಣ್ಯಪುರದಲ್ಲಿ ವಾಸವಿದ್ದರು. ಮಮತಾ ಪತಿ ಆಟೊ ಚಾಲಕನಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚಿಗೆ ದಂಪತಿ ನಡುವೆ ಗಲಾಟೆಯಾಗಿದ್ದು, ಮಮತಾ ಸಾಹು ಊರಿಗೆ ತೆರಳಲು ಸಿದ್ದಳಾಗಿದ್ದಳು ಎನ್ನಲಾಗಿದೆ.

ಆಟೊ ಚಾಲಕನಾಗಿದ್ದ ಪತಿ ಗುರುವಾರ ರಾತ್ರಿ 7 ರಿಂದ 9:45ರ ಕೆಲಸಕ್ಕೆ ತೆರಳಿದ್ದಾಗ ಮಮತಾ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಪತಿಗೆ ಸೆಲ್ಫಿ ಪೋಟೋ ಕಳಿಸಿದ್ದ ಮಮತಾ, ಚಾಕು ತೆಗೆದುಕೊಂಡು ತಾನೂ ಸಹ ಕತ್ತು ಕೊಯ್ದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ.

ಪೋಟೋ ನೋಡಿದ್ದ ಪತಿ ಮನೆಗೆ ಬರುವಷ್ಟರಲ್ಲಿ ಮಕ್ಕಳಿಬ್ಬರೂ ಮೃತಪಟ್ಟಿದ್ದರು. ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News