ಬೆಂಗಳೂರು | ಚಾಕುವಿನಿಂದ ಇರಿದು ಮಹಿಳೆಯ ಹತ್ಯೆ; ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ಮದುವೆಯಾಗುವಂತೆ ಪೀಡಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ರೇಣುಕಾ(30) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಕೆ.ಜಿ.ಹಳ್ಳಿ ಠಾಣೆಯ ಪೊಲೀಸರು, ಆರೋಪಿ ಕುಟ್ಟಿ ಎಂಬಾತನನ್ನು ಬಂಧಿಸಿ ತನಿಖೆ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.
ರೇಣುಕಾಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಪತಿಯಿಂದ ವಿಚ್ಛೇದನ ಪಡೆದ ನಂತರ, ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್‍ನಲ್ಲಿ ಮಗುವಿನೊಂದಿಗೆ ವಾಸಿಸುತ್ತಿದ್ದರು. ಇದೇ ವೇಳೆ, ಅದೇ ಪ್ರದೇಶದ ನಿವಾಸಿ ಮತ್ತು ಫೈನಾನ್ಸ್ ಕಂಪೆನಿಯೊಂದರ ಉದ್ಯೋಗಿಯಾದ ಕುಟ್ಟಿ ಜೊತೆ ರೇಣುಕಾಗೆ ಪರಿಚಯವಾಗಿ ಪ್ರೀತಿ ಬೆಳೆದಿತ್ತು.
ಕೆಲವು ದಿನಗಳಿಂದ ರೇಣುಕಾ ಅವರು ಕುಟ್ಟಿಯೊಂದಿಗೆ ಮದುವೆಯಾಗುವಂತೆ ತೀವ್ರ ಒತ್ತಡ ಹೇರುತ್ತಿದ್ದರು. ‘ನೀನು ಕೇವಲ ಕಾಲಹರಣಕ್ಕಾಗಿ ನನ್ನನ್ನು ಪ್ರೀತಿಸುವುದು ಬೇಡ, ಕೂಡಲೇ ಮದುವೆಯಾಗಬೇಕು’ ಎಂದು ರೇಣುಕಾ ದುಂಬಾಲು ಬಿದ್ದಿದ್ದರು. ಈ ನಿರಂತರ ಒತ್ತಡದಿಂದ ರೊಚ್ಚಿಗೆದ್ದಿದ್ದ ಕುಟ್ಟಿ, ರೇಣುಕಾಳ ಹತ್ಯೆಗೆ ಸಂಚು ರೂಪಿಸಿದ್ದನು ಎಂದು ತಿಳಿದುಬಂದಿದೆ.
ನ.1ರಂದು ರೇಣುಕಾ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಆಕೆಯನ್ನು ತಡೆದ ಕುಟ್ಟಿ, ಪಿಳ್ಳಣ್ಣ ಗಾರ್ಡನ್‍ನಲ್ಲಿರುವ ಸರಕಾರಿ ಶಾಲೆಯ ಬಳಿಗೆ ಕರೆದೊಯ್ದು, ಮಾತಿನ ಚಕಮಕಿ ನಡೆಸಿದ್ದಾನೆ. ಕೋಪದ ಭರದಲ್ಲಿ ಕುಟ್ಟಿ ತನ್ನ ಬಳಿ ಇದ್ದ ಚಾಕುವನ್ನು ತೆಗೆದು ರೇಣುಕಾಳ ಎದೆ ಮತ್ತು ದೇಹದ ಇತರೆ ಭಾಗಗಳಿಗೆ ಇರಿದು, ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದುಬಿದ್ದಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.