ಬೆಂಗಳೂರು: ಎರಡು ವಾರಗಳ ಹಿಂದೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಅದು ಸುಮಾರು ಎರಡು ತಿಂಗಳ ಹಿಂದೆ ಹತ್ಯೆಗೀಡಾಗಿದ್ದ ಮಹಿಳೆಯ ಅಸ್ಥಿಪಂಜರ ಎಂಬುದು ತಿಳಿದುಬಂದಿದ್ದು, ಮೃತರನ್ನು ಸುಜಾತಾ (34) ಎಂದು ಗುರುತಿಸಲಾಗಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಜಾತಾರ ಎರಡನೇ ಪತಿ ಫಯಾಝ್ ಪಾಷಾ (24) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 6ರಂದು ಕೊಡಿಗೆಹಳ್ಳಿಯ ಗುಂಡಾಂಜನೇಯ ದೇವಸ್ಥಾನದ ಪಾರ್ಕ್ ರಸ್ತೆಯಲ್ಲಿ ಚೀಲವೊಂದರಲ್ಲಿ ಮಹಿಳೆಯ ತಲೆಬುರುಡೆ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ: ಮೊದಲ ಪತಿ ಮೃತಪಟ್ಟ ಬಳಿಕ ಸುಮಾರು ಐದು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ಸುಜಾತಾರಿಗೆ ಇತ್ತೀಚಿಗೆ ತನಗಿಂತ ಸುಮಾರು 10 ವರ್ಷ ಚಿಕ್ಕವನಾದ ಫಯಾಝ್ ಪಾಷಾನ ಪರಿಚಯವಾಗಿತ್ತು. ನಂತರ ಇಬ್ಬರೂ ಪರಸ್ಪರ ಒಪ್ಪಿ ಐದು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಸುಜಾತಾಳ ನಡವಳಿಕೆ ಸರಿಯಿಲ್ಲ ಎಂದು ಆರೋಪಿಸಿ ಫಯಾಖ್ ಆಕೆಯನ್ನ ತೊರೆದು ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದ. ಬಳಿಕ ಮತ್ತೆ ಸಂಸಾರ ನಡೆಸುವ ಉದ್ದೇಶದಿಂದ ಸುಜಾತಾ ತಾನೇ ಫಯಾಝ್ ನನ್ನು ಸಂಪರ್ಕಿಸಿ, ಮರಳಿ ಮನೆಗೆ ಬರುವಂತೆ ಮನವೊಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಫಯಾಝ್ ವಾಪಸ್ ಬಂದ ಬಳಿಕವೂ ಇಬ್ಬರ ನಡುವಿನ ಜಗಳ ಮುಂದುವರಿದಿತ್ತು. ಫಯಾಝ್ ಪಾಷಾ ಸುಜಾತಾಳನ್ನ ಪಾರ್ಕ್ ಸಮೀಪ ಕರೆದೊಯ್ದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಮೃತದೇಹವನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾಗರಾಜ್ ಅಪ್ಪಸಂದ್ರ/ವಾರ್ತಾಭಾರತಿ

ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರು

ನಾಗರಾಜ್ ಅಪ್ಪಸಂದ್ರ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ‘ವಾರ್ತಾಭಾರತಿ’ ಡಿಜಿಟಲ್ ನಲ್ಲಿ ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.