ಬೆಂಗಳೂರು: 2026–27ನೇ ಸಾಲಿನ ಎಥೆನಾಲ್ ಸರಬರಾಜು ವರ್ಷಕ್ಕೆ ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್(B-Heavy Molasses)ನಿಂದ ಎಥೆನಾಲ್ ಉತ್ಪಾದನೆಯ ಮೇಲಿನ ಕೇಂದ್ರ ಸರಕಾರದ ನಿರ್ಬಂಧಗಳನ್ನು ಪ್ರಶ್ನಿಸಿ ಡಿಸ್ಟಿಲರಿ ಕಂಪನಿಯೊಂದು ಸಲ್ಲಿಸಿದ ಅರ್ಜಿಯೊಂದಕ್ಕೆ ಮಧ್ಯಂತರ ಪರಿಹಾರ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಅಕ್ಟೋಬರ್ 22ರಂದು ಕೇಂದ್ರ ಸರಕಾರ ಕಬ್ಬಿನ ರಸ ಮತ್ತು ಬಿ ಹೆವಿ ಮೊಲಾಸಸ್ ನಿಂದ ಎಥೆನಾಲ್ ಉತ್ಪಾದನೆ ಮಾಡುವುದಕ್ಕೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿತ್ತು. ಈ ಕ್ರಮವನ್ನ ಪ್ರಶ್ನೆ ಮಾಡಿ ಡಿಸ್ಟಲರಿ ಕಂಪೆನಿಯೊಂದು ಮಧ್ಯಂತರ ತಡೆ ಕೋರಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಜಸ್ಟೀಸ್ ಸಿ.ಎಂ.ಪೂಣಚ್ಚರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಮಾರುಕಟ್ಟೆಯಲ್ಲಿ ಸಕ್ಕರೆ ಕೊರೆತೆಯನ್ನ ಪರಿಗಣಿಸಿ ಕೇಂದ್ರ ಸರಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.

ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಮೀಸಲಾಗಿರುವ ಪ್ರದೇಶದಲ್ಲಿ ಬೆಳೆಯುವ 95% ಕಬ್ಬಿನ ಮೇಲೆ ತಮ್ಮ ಕಾರ್ಯಾಚರಣೆಗಳು ಪರಿಣಾಮ ಬೀರುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು. ತಮ್ಮ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಕಬ್ಬನ್ನು ಉಳಿದ 5 ಶೇ.ದಿಂದ ಪಡೆಯಲಾಗುವುದು ಎಂದು ಡಿಸ್ಟಲರಿ ಕಂಪೆನಿ ಪರ ವಕೀಲರು ವಾದಿಸಿದರು.

ರೈತರು ತಮ್ಮ ವಿವೇಚನೆಯಿಂದ ಮಾರಾಟ ಮಾಡಲು ಮುಕ್ತರಾಗಿದ್ದಾರೆ. ನಿರ್ಬಂಧಗಳನ್ನು ನಿರ್ವಹಿಸಲು ಅನುಮತಿಸುವುದರಿಂದ ಅವರ ಉತ್ಪಾದನಾ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ, ಅವರ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಸರಿಪಡಿಸಲಾಗದ ಆರ್ಥಿಕ ನಷ್ಟವನ್ನು ಉಂಟುಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಅರ್ಜಿದಾರರ ವಾದವನ್ನು ವಿರೋಧಿಸಿ, ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಸಕ್ಕರೆ ಕೊರತೆಯನ್ನು ನೀಗಿಸಲು 1955 ರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ನೀಡಲಾದ ಅಧಿಕಾರಗಳ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ವಾದಿಸಿದರು. ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸುವುದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಕ್ಕರೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದ ಮಂಡಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾಗರಾಜ್ ಅಪ್ಪಸಂದ್ರ/ವಾರ್ತಾಭಾರತಿ

ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರು

ನಾಗರಾಜ್ ಅಪ್ಪಸಂದ್ರ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ‘ವಾರ್ತಾಭಾರತಿ’ ಡಿಜಿಟಲ್ ನಲ್ಲಿ ಕ್ರೈಂ ಹಾಗೂ ಹೈಕೋರ್ಟ್ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.