Bengaluru | ಕರೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪತ್ನಿಯ ಕೊಲೆ; ಆರೋಪಿ ಪತಿ ಬಂಧನ
ಬೆಂಗಳೂರು: ಕರೆಮಾಡಿದಾಗ ಹೆಂಡತಿ ರಿಸೀವ್ ಮಾಡಲ್ಲ ಎಂಬ ಕಾರಣಕ್ಕೆ ಗಂಡನೇ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಗುಂಜಾ ಮದೇಷಿಯಾ(38) ಕೊಲೆಯಾದ ಮಹಿಳೆ. ಆಕೆಯ ಪತಿ ರಂಜಿತ್ ಕುಮಾರ್ ಗುಪ್ತಾ ಆರೋಪಿ. ಬಿಹಾರ ಮೂಲದವರಾಗಿದ್ದ ಇವರು ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳೇಕಳ್ಳಿಯಲ್ಲಿ ವಾಸವಾಗಿದ್ದರು.
ದಂಪತಿಗೆ ಇಬ್ಬರು ಮಕ್ಕಳಿದ್ದು, ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಗುರುವಾರ ಮಕ್ಕಳು ಶಾಲೆಗೆ ಹೋದ ಬಳಿಕ ನಾನು ಯಾವಾಗ ಕಾಲ್ ಮಾಡಿದ್ರು ನೀನು ರಿಸೀವ್ ಮಾಡಲ್ಲ ಎಂದು ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿ ಗುಂಜಾ ಮದೇಷಿಯಾ ಮೃತಪಟ್ಟ್ಟಿದ್ದಾರೆ.
ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಬೇಕು ಎಂದು ರಂಜಿತ್ ಅಡುಗೆ ಎಣ್ಣೆಯನ್ನ ಕಾಯಿಸಿ ಆಕೆಯ ಮೇಲೆ ಸುರಿದು ಚರ್ಮವನ್ನ ಸುಲಿಯುವ ಪ್ರಯತ್ನ ಮಾಡಿದ್ದಾನೆ. ಇದರಿಂದಾಗಿ ಶವ ವಿರೂಪವಾಗಿ ಅಕಸ್ಮಿಕ ಘಟನೆ ಎಂದು ಬಿಂಬಿತವಾಗುತ್ತೆ ಎಂದು ಲೆಕ್ಕಚಾರ ಮಾಡಿದ್ದ.
ಆದರೆ ಇವರ ಜಗಳವನ್ನ ನೋಡಿದ್ದ ನೆರೆಹೊರೆಯವರು ಮಹಿಳೆ ಕಾಣದಿದ್ದಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ರಂಜಿತ್ ಕೊಲೆ ಮಾಡಿರುವುದನ್ನ ಒಪ್ಪಿಕೊಂಡಿದ್ದು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ.