×
Ad

ಬೆಂಗಳೂರು : ವಿವಾಹ ವಾರ್ಷಿಕೋತ್ಸವಕ್ಕೆ ‘ಉಡುಗೊರೆ ಕೊಡಲಿಲ್ಲ’ ಎಂಬ ಕಾರಣಕ್ಕೆ ಪತಿಗೆ ಚಾಕು ಇರಿದ ಪತ್ನಿ

Update: 2024-03-06 19:59 IST

ಬೆಂಗಳೂರು: ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆ ಕೊಡಲಿಲ್ಲ ಎಂಬ ಕಾರಣಕ್ಕೆ ಮಲಗಿದ್ದ ಪತಿಗೆ ಆತನ ಪತ್ನಿ ಚಾಕುವಿನಿಂದ ಇರಿದ ಘಟನೆ ಇಲ್ಲಿನ ಬೆಳ್ಳಂದೂರಿನ ಜುನ್ನಸಂದ್ರದಲ್ಲಿ ವರದಿಯಾಗಿದೆ.

ಫೆ.27ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳು ಪತಿಯ ಹೇಳಿಕೆ ಆಧರಿಸಿ, ಆತನ 35 ವರ್ಷ ವಯಸ್ಸಿನ ಪತ್ನಿಯ ವಿರುದ್ಧ ಬೆಳ್ಳಂದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ದೂರುದಾರ ವ್ಯಕ್ತಿಯು ಜುನ್ನಸಂದ್ರದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದರು. ‘ಪ್ರತಿವರ್ಷ ವಿವಾಹ ವಾರ್ಷಿಕೋತ್ಸವದ ದಿನ ಪತ್ನಿಗೆ ಏನಾದರೂ ಉಡುಗೊರೆ ನೀಡುತ್ತಿದ್ದೆ. ಆದರೆ, ಈ ವರ್ಷ ನನ್ನ ತಾತ ನಿಧನರಾಗಿದ್ದರಿಂದ ಹಿಂದಿನ ದಿನ ಉಡುಗೊರೆ ಖರೀದಿಸಲು ಸಾಧ್ಯವಾಗಿರಲಿಲ್ಲ. ಅದೇ ಕೋಪದಲ್ಲಿದ್ದ ಪತ್ನಿ, ನಾನು ನಿದ್ದೆಗೆ ಜಾರಿದ್ದ ಸಮಯದಲ್ಲಿ ರಾತ್ರಿ 1:30ರ ಸುಮಾರಿಗೆ ಚಾಕುವಿನಿಂದ ಇರಿದಿದ್ದಾಳೆ' ಎಂದು ಪತಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಚಾಕು ಇರಿತದಿಂದ ಪತಿಯ ಕೈಗೆ ಗಾಯವಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಗಾಯಾಳುವಿನ ಹೇಳಿಕೆ ಪಡೆದುಕೊಂಡು ಬೆಳ್ಳಂದೂರು ಠಾಣೆಯಲ್ಲಿ ಮಾ.1ರಂದು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಗಂಡ ಮತ್ತು ಹೆಂಡತಿಯನ್ನು ಪೊಲೀಸರು ಕೌನ್ಸಿಲಿಂಗ್‍ಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News