×
Ad

Bengaluru | ಐಟಿ ಸಂಸ್ಥೆಯ ಡೇಕೇರ್‌ ಸೆಂಟರ್ ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆರೋಪ: ಓರ್ವ ಮಹಿಳೆಯ ಬಂಧನ

ಸರಕಾರದಿಂದ ವರದಿ ಕೇಳಿದ NHRC

Update: 2026-07-04 08:33 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 4: ನಗರದ ಕ್ಯಾಪ್‌ಜೆಮಿನಿ ಐಟಿ ಸಂಸ್ಥೆಯ ಬೆಂಗಳೂರು ಕ್ಯಾಂಪಸ್‌ನಲ್ಲಿರುವ ಡೇಕೇರ್ ಸೆಂಟರ್ ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪದ ಪ್ರಕರಣದಲ್ಲಿ ಓರ್ವ ಮಹಿಳೆಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತೆಯನ್ನು 55 ವರ್ಷದ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಆಕೆಯನ್ನು ಗುರುವಾರ ಬಂಧಿಸಿ, ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಸುರೇಶ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣದ ಇನ್ನೊಬ್ಬ ಆರೋಪಿ ಮಂಜುಳಾ ತಲೆಮರೆಸಿಕೊಂಡಿದ್ದು, ಆಕೆಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಜುಲೈ 2ರಂದು ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖಿಸಲಾಗಿದ್ದ ಇತರ ಮೂವರು ಸಿಬ್ಬಂದಿಯನ್ನು ವಿಚಾರಣೆಯ ಬಳಿಕ ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ಆರೋಪ ಸಾಬೀತುಪಡಿಸುವಂತಹ ಪುರಾವೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ವೀಡಿಯೊಗಳನ್ನು ಡೇಕೇರ್‌ನ ಮಾಜಿ ಉದ್ಯೋಗಿಯೊಬ್ಬರು ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

"ವೀಡಿಯೊಗಳನ್ನು ಯಾವಾಗ ಮತ್ತು ಯಾವ ಸಂದರ್ಭಗಳಲ್ಲಿ ಚಿತ್ರೀಕರಿಸಲಾಗಿದೆ ಹಾಗೂ ಅವು ಹೇಗೆ ಬಹಿರಂಗಗೊಂಡವು ಎಂಬ ಎಲ್ಲ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಎರಡು ವಾರಗಳೊಳಗೆ ಪ್ರಕರಣದ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಆಯೋಗ, ಡೇಕೇರ್ ಸಿಬ್ಬಂದಿ ಮಕ್ಕಳನ್ನು ವಾಷಿಂಗ್ ಮೆಷಿನ್ ಒಳಗೆ ಇರಿಸುವುದು, ಟಾಯ್ಲೆಟ್ ಜೆಟ್ ಸ್ಪ್ರೇ ಬಳಸಿ ಅವರ ಬಾಯಿಗೆ ನೀರು ಸಿಂಪಡಿಸುವುದು, ಅಳುವ ಮಕ್ಕಳನ್ನು ಶೌಚಾಲಯದೊಳಗೆ ಕೂಡಿ ಹಾಕುವುದು, ಪಾಶ್ಚಾತ್ಯ ಮಾದರಿಯ ಕಮೋಡ್‌ಗಳಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸುವುದು ಹಾಗೂ ಬೆದರಿಕೆ ಹಾಕುವ ದೃಶ್ಯಗಳು ವೈರಲ್ ವೀಡಿಯೊಗಳಲ್ಲಿ ಕಂಡುಬಂದಿವೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News