Bengaluru | ಮುಂದುವರಿದ ಪಾದಚಾರಿ ಮಾರ್ಗ ಅತಿಕ್ರಮಣ ತೆರವು: 5 ಪಾಲಿಕೆಗಳ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ತೀವ್ರ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆಯು 3ನೇ ದಿನವಾದ ಶುಕ್ರವಾರವೂ ಯಶಸ್ವಿಯಾಗಿ ಮುಂದುವರೆದಿದೆ.
ಜು.3ರ ಶುಕ್ರವಾರದಂದು ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 14.10 ಕಿ.ಮೀ. ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ 33 ಅಂಗಡಿಗಳು/ಬೀದಿ ವ್ಯಾಪಾರಿಗಳು, 52 ತಳ್ಳುವ ಗಾಡಿಗಳು, 121 ಶೀಟ್/ಮೇಲ್ಛಾವಣಿ/ಕೆನೋಪಿಗಳು, 109 ಮೆಟ್ಟಿಲು/ರ್ಯಾಂಪ್‍ಗಳು, 141 ಜಾಹೀರಾತು ನಾಮಫಲಕಗಳು, 2 ತಾತ್ಕಾಲಿಕ ಶೆಡ್‍ಗಳು ಹಾಗೂ 46.50 ಟನ್ ತ್ಯಾಜ್ಯ, ಮಣ್ಣು ಮತ್ತು ದೂಳನ್ನು ತೆರವುಗೊಳಿಸಲಾಗಿದೆ ಎಂದು ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.
ಈ ಕಾರ್ಯಾಚರಣೆಗಾಗಿ ಒಟ್ಟು 7 ಜೆಸಿಬಿಗಳು, 35 ಟ್ರಾಕ್ಟರ್‍ಗಳು, 3 ಇತರೆ ಯಂತ್ರಗಳು ಹಾಗೂ 168 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಪಾದಚಾರಿಗಳ ಸುರಕ್ಷತೆ ಹಾಗೂ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲಿಯೂ ಕೈಗೊಳ್ಳಲಾಗುವುದು ಎಂದು ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
ಇನ್ನು, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 12 ರಸ್ತೆಗಳಲ್ಲಿ 10.95 ಕಿ.ಮೀ. ವಿಸ್ತೀರ್ಣದ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ 85 ಕಾರ್ಮಿಕರು, 7 ಜೆಸಿಬಿಗಳು, 20 ಟ್ರಾಕ್ಟರ್‍ಗಳು ಹಾಗೂ 03 ಟಿಪ್ಪರ್‍ಗಳು ಬಳಕೆ ಮಾಡಲಾಗಿದೆ ಎಂದು ಪಾಲಿಕೆಯ ಆಯುಕ್ತ ಜಿ.ಜಗದೀಶ್ ತಿಳಿಸಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕಾರ್ಯಾಚರಣೆಯಲ್ಲಿ 64 ಪೆಟ್ಟಿ ಅಂಗಡಿಗಳು, 107 ತಳ್ಳುವ ಗಾಡಿಗಳು, 18 ಶಿಟ್/ಮೇಲ್ಚಾವಣಿ, 11 ಶೆಡ್‍ಗಳು, 8 ರ್ಯಾಂಪ್ಸ್/ ಮೆಟ್ಟಿಲುಗಳು, 10 ಆಸನಗಳು, 10 ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು, 6 ಕೆನೋಪಿ ಹಾಗೂ 42.5 ಟನ್ ಕಟ್ಟಡ ತ್ಯಾಜ್ಯ ಇತರೆ ತ್ಯಾಜ್ಯಗಳ ತೆರವುಗೊಳಿಸಲಾಗಿದೆ ಎಂದು ಜಿ.ಜಗದೀಶ್ ವಿವರಿಸಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸಾರ್ವಜನಿಕರಿಂದ ಬಂದಿದ್ದ ದೂರುಗಳು ಹಾಗೂ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ನಗರ ಪಾಲಿಕೆಯ ಶಾಂತಿನಗರ, ಸಿ.ವಿ.ರಾಮನ್ ನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ ಹಾಗೂ ಶಿವಾಜಿನಗರ ವಿಭಾಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ಜಿ.ಜಗದೀಶ್ ತಿಳಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 11.35 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖ್ಯರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದ ವಾಣಿಜ್ಯ ಮಳಿಗೆಗಳ ಮೆಟ್ಟಿಲುಗಳು, ಅಂಗಡಿಗಳು, ಶೆಡ್ ಹಾಗೂ ಇತರೆ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಆಯುಕ್ತ ಕೆ.ಎನ್.ರಮೇಶ್ ತಿಳಿಸಿದರು.