×
Ad

2028ರ ವಿಧಾನಸಭಾ ಚುನಾವಣೆಯು ದಲಿತ ಸಿಎಂ ಚುನಾವಣೆಯಾಗಿರುತ್ತದೆ: ಮಾವಳ್ಳಿ ಶಂಕರ್

Update: 2026-07-04 00:01 IST

ಬೆಂಗಳೂರು: ಮುಂಬರಲಿರುವ 2028ರ ವಿಧಾನಸಭಾ ಚುನಾವಣೆ ದಲಿತ ಮುಖ್ಯಮಂತ್ರಿಯ ಚುನಾವಣೆಯಾಗಿರುತ್ತದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ದಸಂಸ(ಅಂಬೇಡ್ಕರ್ ವಾದ) ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ‘ದಲಿತ ಜನಾಗ್ರಹ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 101 ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿವೆ. 51 ಜಾತಿಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ. ಎಲ್ಲರೂ ಸೇರಿ 1.30 ಕೋಟಿ ಜನಸಂಖ್ಯೆಯಲ್ಲಿದ್ದೇವೆ. ಆದರೆ ಈಗಲೂ ಉಪಮುಖ್ಯಮಂತ್ರಿಯಾಗಿಯೇ ಇರಬೇಕಾ? ಎನ್ನುವುದನ್ನು ಪ್ರಶ್ನಿಸಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಬುನಾದಿಯೇ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಎನ್ನುವುದನ್ನು ಕಾಂಗ್ರೆಸ್ ಪಕ್ಷ ಪರಿಗಣಿಸಬೇಕಿತ್ತು. ಆದರೆ ಅದು ಆಗುತ್ತಿಲ್ಲ. ನಾವು ಕೇವಲ ಮತ ಬ್ಯಾಂಕ್‍ಗಳಾಗಿದ್ದೇವೆ. ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಹಿಂದುಳಿದ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಯಾಕೆ? ದಲಿತ ಸಮುದಾಯದವರು ಇವತ್ತಿಗೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ನಾವು ಯಾವ ಸಮುದಾಯದ ವಿರೋಧಿಗಳಲ್ಲಿ ಸಂವಿಧಾನದ ಪ್ರಕಾರ ನಮ್ಮ ಹಕ್ಕು ಮತ್ತು ಅಧಿಕಾರವನ್ನು ಕೇಳುತ್ತಿದ್ದೇವೆ ಎನ್ನುವುದನ್ನು ಹಾಗೂ ನಮ್ಮ ಮತದ ಬೆಲೆಯನ್ನು ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ದಲಿತರು, ಮುಸ್ಲಿಮರು ಹಾಗೂ ಇತರೆ ಹಿಂದುಳಿದ ವರ್ಗಗಳ ನೆರವಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಈ ಸಮುದಾಯಗಳಿಗೆ ನ್ಯಾಯ ಸಿಕ್ಕಿಲ್ಲ. ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಹೋರಾಡುವ ಸ್ಥಿತಿ ಬಂದಿದೆ. ಹಿಂದುಳಿದ ಸಮುದಾಯದ 19 ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಮತ್ತೆ ಕೇಳುವ ಸ್ಥಿತಿ ಬಂದಿದೆ. ಸರಕಾರ ಈಗಲಾದರೂ ಸ್ಪಂದಿಸಬೇಕು ಎಂದರು.

ದೇಶದಲ್ಲಿ ಅಸ್ಪೃಶ್ಯತೆ ಆಚರಣೆ ಈಗಲೂ ನಡೆಯುತ್ತಿದೆ. ಯಾವ ಪಕ್ಷದವರೂ ದಲಿತ ಸಮುದಾಯದವರ ಕ್ಷಮೆ ಕೋರಿಲ್ಲ. ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳವಣಿಗೆ ಸಾಧಿಸಿದೆ ಎಂದು ಹೇಳಲಾಗುತ್ತದೆ. ಇದು ಮುಖ್ಯವಲ್ಲ. ತಲಾ ಆದಾಯದಲ್ಲಿ 138ನೇ ಸ್ಥಾನದಲ್ಲಿದ್ದೇವೆ. ಹಸಿವಿನ ಸೂಚ್ಯಂಕದಲ್ಲಿ 105ನೇ ಸ್ಥಾನದಲ್ಲಿದ್ದೇವೆ. ನೆರೆಯ ಶ್ರೀಲಂಕಾ 56ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಕವಿ ಸುಬ್ಬು ಹೊಲೆಯಾರ್, ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ, ಸಿಪಿಎಂ ಮುಖಂಡ ಕೆ.ಪ್ರಕಾಶ್, ಸಿಪಿಐ ಮುಖಂಡ ಸಾತಿ ಸುಂದರೇಶ್, ರಂಗಕರ್ಮಿ ಜನಾರ್ಧನ್(ಜನ್ನಿ), ರೈತ ಮುಖಂಡ ವೀರಸಂಗಯ್ಯ ಮತ್ತಿತರರು ಹಾಜರಿದ್ದರು.


ಪ್ರಮುಖ ಆಗ್ರಹಗಳು

1.ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ ಜಾರಿಗೊಳಿಸಬೇಕು.

2. ವಿಶೇಷ ಘಟಕ ಯೋಜನೆ ಕಾಯ್ದೆ ಸೆಕ್ಷನ್ 7(ಸಿ)ತಿದ್ದುಪಡಿ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಎಸ್‍ಸಿಎಸ್‍ಪಿ, ಟಿಎಸ್‍ಪಿ ಹಣವನ್ನು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಳಸಿಕೊಳ್ಳಬೇಕು.

3.ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು.

4.ದಲಿತ, ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು.

5.ನೆನೆಗುದಿಗೆ ಬಿದ್ದಿರುವ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.

6.ಪರಿಶಿಷ್ಟರ ಭೂ ಹಕ್ಕನ್ನು ರಕ್ಷಿಸಬೇಕು.

7.ರಾಜ್ಯದಲ್ಲಿ ವಸತಿಹೀನ ಪರಿಶಿಷ್ಟರ ಸಮೀಕ್ಷೆ ನಡೆಸಿ, ವಸತಿ ಕಲ್ಪಿಸಬೇಕು.

8.ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒದಗಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News