×
Ad

ಮುಖ್ಯಮಂತ್ರಿಯಿಂದ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ: ಬಿ.ವೈ.ವಿಜಯೇಂದ್ರ

Update: 2026-07-03 15:07 IST

ಬೆಂಗಳೂರು: ಬೆಳೆ ಬೆಳೆಯದಿರಿ ಎಂದು ಮುಖ್ಯಮಂತ್ರಿ ನೀಡಿದ ಹೇಳಿಕೆಯು ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿ ಒಂದು ಹೇಳಿಕೆ ಕೊಟ್ಟಿದ್ದಾರೆ. ನೀರಿಲ್ಲ; ಬೆಳೆ ಬೆಳೆಯುವುದು ಬೇಡ. ಭೀಕರ ಬರಗಾಲದ ಮುನ್ಸೂಚನೆ ವಿಚಾರವನ್ನು ಸಂಪುಟದಲ್ಲಿ ಚರ್ಚಿಸಿ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಬೆಳೆಯದಿರಿ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದು ಬಹಳ ಆಶ್ಚರ್ಯ ಮಾತ್ರವಲ್ಲದೇ, ಅತ್ಯಂತ ನೋವುಂಟು ಮಾಡಿದೆ ಎಂದರು.

ಇಡೀ ದೇಶದಲ್ಲಿ ಬರಗಾಲದ ಛಾಯೆ ಮೂಡಿದೆ. ಪ್ರಕೃತಿ ಮುನಿಸಿಕೊಂಡ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಅಭಯ, ಭರವಸೆಯನ್ನು ಸರಕಾರ ನೀಡಬೇಕಿತ್ತು. ಮುಂದಿನ 15- 20 ದಿನ ಮಳೆ ಬೀಳುವ ಆಶಾಭಾವ ಇದೆ. ಮುಖ್ಯಮಂತ್ರಿ ಹೇಳಿದರೆಂದು ಬಿತ್ತನೆಯೇ ಮಾಡದೇ ಇದ್ದರೆ ಯಾರು ಹೊಣೆಗಾರರು ಎಂದು ವಿಜಯೇಂದ್ರ ಪ್ರಶ್ನಿಸಿದರು.

ಶೇ 50- 60 ಮಳೆ ಕಡಿಮೆ ಇರುವಾಗ ರಾಜ್ಯ ಸರಕಾರದ ಆದ್ಯತೆ ಏನು? ಇವರೇನಾದರೂ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ವಿಜಯೇಂದ್ರ, ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಸಂಬಂಧಿಸಿ ಅನುದಾನ ಬಿಡುಗಡೆ ಮಾಡಿದ್ದಾರಾ? ಬರಗಾಲದ ಮುನ್ಸೂಚನೆ ವಿಚಾರ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯೇ? ಯಾಕೆ ಈ ರೀತಿ ಕಪಟ ನಾಟಕ ಆಡುತ್ತಿದ್ದೀರಿ? ಎಂದು ಕೇಳಿದರು.

ಮುಖ್ಯಮಂತ್ರಿ ರೈತಪರವಾಗಿಲ್ಲದೇ ರಿಯಲ್ ಎಸ್ಟೇಟ್ ಪರವಾದರೆ ರಾಜ್ಯದ ಹಣೆಬರಹ ಇದೇ ಆಗುತ್ತದೆ. ನಮ್ಮ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ದುಸ್ಸಾಹಸಕ್ಕೆ ಯಾಕೆ ಕೈ ಹಾಕಿದ್ದೀರಿ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದ ವಿಜಯೇಂದ್ರ, ರೈತರಿಗೆ ಕೊಡಬೇಕಾದ ಯೋಜನೆ, ಆಡಳಿತ ಸನ್ನದ್ಧತೆ ಕಡೆಗೆ ಗಮನಿಸದೇ ಮುಖ್ಯಮಂತ್ರಿ ಕೈಚೆಲ್ಲಿ ಕೂತರೆ ಹೇಗೆ ಎಂದು ಟೀಕಿಸಿದರು.

ಎಸ್ಐಆರ್ ಇರುವ ಕಾರಣ ಆಗಸ್ಟ್ ಮಧ್ಯದಲ್ಲಿ ಮುಂಗಾರು ಅಧಿವೇಶನ ಮಾಡುವುದಾಗಿ ಹೇಳಿದ್ದಾರೆ. ಶಾಸಕರು ಮನೆ ಮನೆಗೆ ತೆರಳಿ ಎಸ್ಐಆರ್ ಮಾಡುತ್ತಾರಾ ಎಂದು ಪ್ರಶ್ನೆ ಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್ ಆಗಿದೆ. ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿಲ್ಲ. ಇದೇ ಕಾರಣಕ್ಕೆ ಅಧಿವೇಶನ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರ ಪೂರ್ಣ ಸಂಪುಟ ಇದ್ದರೂ ನೆರೆ ಬಂದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ ಎಂದು ದೂರಿದರು.

ಎಸ್ಐಆರ್ ಅಡಿ ಬಿಎಲ್ಒಗಳ ದುರುಪಯೋಗ ಆಗುತ್ತಿದೆ. ಅಧಿಕಾರಿಗಳನ್ನು ಮಸೀದಿಯಲ್ಲಿ ಕೂರಿಸಿ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದೆ. ರಾಜ್ಯ ಸರಕಾರದಿಂದ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಾಗರದಲ್ಲಿ ಬಿಎಲ್ಒಗಳನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News