‘ಗೃಹಜ್ಯೋತಿ’ ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ : ಬೆಸ್ಕಾಂ
ಬೆಂಗಳೂರು : ‘ಗೃಹಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಆರಂಭಗೊಂಡಿದ್ದು, ಬಾಡಿಗೆದಾರರು ಆಧಾರ್ ಮಾಹಿತಿ ಅಪ್‍ಡೆಟ್ ಕುರಿತು ಯಾವುದೇ ಕಾರಣಕ್ಕೂ ಗೊಂದಲ ಪಡಬೇಕಾಗಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದರರ ಆಧಾರ್ ವಿವರ ತೆಗೆದು ಹಾಕಿ ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್‍ಡೆಟ್ ಮಾಡಿಕೊಳ್ಳಲಾಗುವುದು. ಹಾಗಾಗಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.
ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ? ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬಂದಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ. ಸಮೀಕ್ಷೆ ವೇಳೆ ಹಳೆಯ ಬಾಡಿಗೆದಾರರ ಆಧಾರ್ ಕಾರ್ಡ್ ಮತ್ತು ವಿವರಗಳನ್ನು ತೆಗೆದುಹಾಕಿ, ಹೊಸ ಬಾಡಿಗೆದಾರರ ಆಧಾರ್ ಸಂಖ್ಯೆ ನಮೂದು ಮಾಡಿಕೊಳ್ಳಲಾಗುವುದು. ಹೀಗಾಗಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ನಿಲ್ಲುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಯಾವುದೇ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆಯ ಸಮಯದಲ್ಲಿ ನಿಮ್ಮ ಆಧಾರ್ ಮತ್ತು ಬಾಡಿಗೆ/ಲೀಸ್ ಕರಾರು ವಿವರಗಳನ್ನು ಅಪ್‍ಡೇಟ್ ಮಾಡಲಿದ್ದಾರೆ.
ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದುದರಿಂದ ಬಾಡಿಗೆದಾರರು ಆತಂಕವಿಲ್ಲದೆ ಬೆಸ್ಕಾಂ ತಂಡಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು. ಜೊತೆಗೆ ಮನೆ ಮಾಲಕರು ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆಂಬಲಿಸಬೇಕು ಎಂದು ಕೋರಿದೆ.
ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ತಮ್ಮ ಹತ್ತಿರದ ಬೆಸ್ಕಾಂ ಉಪ-ವಿಭಾಗದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಕರೆ/ಸಂದೇಶ ಕಳುಹಿಸಬಹುದು. ಬೆಸ್ಕಾಂ ಸಹಾಯವಾಣಿ ಸಂಖ್ಯೆ: 1912, ವಿಶೇಷ ವಾಟ್ಸಾಪ್ ಸಂಖ್ಯೆಗಳು: 94808 16111, 94808 16112, 94808 16113, 94808 16114 ಅನ್ನು (ಸಹಾಯವಾಣಿಯು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ಗಂಟೆಯ ವರೆಗೆ ಲಭ್ಯವಿರುತ್ತದೆ) ಸಂಪರ್ಕಿಸಬಹುದಾಗಿದೆ.