ಕ್ರೀಡಾ ಸಾಮಾಗ್ರಿ ವಿತರಿಸುವ ಯೋಜನೆ ಜಾರಿಯಾಗಿಲ್ಲ : ಸಚಿವ ಭೋಸರಾಜು ಸ್ಪಷ್ಟನೆ
ಬೆಂಗಳೂರು : ಸರಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸುವ ಯೋಜನೆಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಜಾರಿಯಾಗಿಲ್ಲ ಎಂದು ಸಚಿವ ಎನ್.ಎಸ್.ಭೋಸರಾಜು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‍ನ ಸದಸ್ಯ ಎಸ್.ಎಲ್ ಭೋಜೇಗೌಡ ಕ್ರೀಡಾ ಇಲಾಖೆಯಿಂದ ಸರಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 2023 ರಿಂದ ಇಲ್ಲಿಯವರೆಗೆ ಕ್ರೀಡಾ ಸಾಮಗ್ರಿಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ವಿತರಿಸುತ್ತಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಸರಕಾರ ಇನ್ನು ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಗಮನ ಸೆಳೆದರು. ಇದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಯೋಜನೆಗಳು ಜಾರಿಯಲ್ಲಿರುವುದಿಲ್ಲ. ಆದರೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನಮ್ಮೂರ ಶಾಲೆ ನಮ್ಮೂರ ಯುವಜನರು ಯೋಜನೆ ಜಾರಿಯಲ್ಲಿದೆ ಎಂದು ಸಚಿವರು ಹೇಳಿದರು.
ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳನ್ನು ಹೊಂದಿರುವ ಸರಕಾರಿ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹವಾಗಿ 1 ಲಕ್ಷ ರೂ. ಅನುದಾನ ನೀಡಲಾಗುವುದು. ಈ ಪೈಕಿ 10 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಶಾಲೆಯ ದೈಹಿಕ ಶಿಕ್ಷಕರಿಗೆ ಮತ್ತು ಅಗತ್ಯ ಕ್ರೀಡಾ ಸಾಮಗ್ರಿಗಳ ಖರೀದಿಗಾಗಿ 90 ಸಾವಿರ ರೂ.ಗಳನ್ನು ಎಸ್.ಡಿ.ಎಂ.ಸಿ. ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಅನುದಾನ ಲಭ್ಯತೆಯ ಅನುಸಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ 2024-25ನೆ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ(ಕ್ರೈಸ್) 159 ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ದೈನಂದಿನ ಅಭ್ಯಾಸಗಳಿಗೆ ಅವಶ್ಯಕವಿರುವ ಕ್ರೀಡಾಸಾಮಗ್ರಿಗಳನ್ನು ಒಂದು ವಸತಿ ಶಾಲೆಗೆ 84,010 ರೂ.ಗಳಂತೆ ಒಟ್ಟು 1,33,57,590 ರೂ.ಗಳ ವೆಚ್ಚದಲ್ಲಿ ಕ್ರೀಡಾಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಭೋಸರಾಜು ಹೇಳಿದರು.