×
Ad

‘ಬಿಡದಿ ಟೌನ್‍ಶಿಪ್’ ರೈತರ ಅಹವಾಲು ಆಲಿಸಲು ಜು.11ಕ್ಕೆ ‘ಸಾರ್ವಜನಿಕ ವಿಚಾರಣೆ’ : ಸಂಯುಕ್ತ ಹೋರಾಟ-ಕರ್ನಾಟಕ

Update: 2026-07-08 19:40 IST

ಸಾಂದರ್ಭಿಕ ಚಿತ್ರ | PC : AI

ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆಯ ಕುರಿತು ರೈತರ ಅಹವಾಲು ಆಲಿಸಲು ಜು.11ರ ಮಧ್ಯಾಹ್ನ 12:30ಕ್ಕೆ ಬೈರಮಂಗಲ ವೃತ್ತದಲ್ಲಿ ‘ಸಾರ್ವಜನಿಕ ವಿಚಾರಣೆ’ಯನ್ನು ಆಯೋಜಿಸಲಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ತಿಳಿಸಿದೆ.

ಬುಧವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡ ಟಿ.ಯಶವಂತ ಮಾತನಾಡಿ, ಸಾರ್ವಜನಿಕ ವಿಚಾರಣೆ ಸಭೆಯನ್ನು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಭೂ ಹಿತರಕ್ಷಣಾ ಸಂಘದ ಸಹಯೋಗದಲ್ಲಿ ನಡೆಸಲಾಗುತ್ತಿದ್ದು, ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸಾರ್ವಜನಿಕ ವಿಚಾರಣೆಯಲ್ಲಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ಸಮಾಜಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ, ಹಿರಿಯ ಪತ್ರಕರ್ತ ಡಿ.ಉಮಾಪತಿ ಭಾಗವಹಿಸಲಿದ್ದು, ಬಿಡದಿ ಟೌನ್‍ಶಿಪ್ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ಆತಂಕ ಅನುಭವಿಸುತ್ತಿರುವ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ಅಹವಾಲನ್ನು ಆಲಿಸಿ ತೀರ್ಪು ಪ್ರಕಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಸುತ್ತಮುತ್ತಲಿನ ಸಮೃದ್ಧ ಹಸಿರು ಪ್ರದೇಶಗಳು ಮತ್ತು ನೀರಾವರಿ ಹೊಂದಿರುವ ಕೃಷಿ ಭೂಮಿ ನಗರದ ಪರಿಸರ ಸಮತೋಲನ ಮತ್ತು ಆಮ್ಲಜನಕದ ಮೂಲವಾಗಿವೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಇಂತಹ ಪ್ರದೇಶಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಬಿಡದಿ ಟೌನ್‍ಶಿಪ್ ಯೋಜನೆಗೆ ಸಂಬಂಧಿಸಿದಂತೆ, ಬಿಡದಿ ಪ್ರದೇಶದಲ್ಲಿ ಕೃಷಿ ಭೂಮಿಯೇ ಇಲ್ಲ ಎಂಬ ಅಪಪ್ರಚಾರ ಮೊದಲು ನಡೆದಿತ್ತು. ಇದೀಗ ಸಮೃದ್ಧ ಕೃಷಿ ಪ್ರದೇಶದ ವಾಸ್ತವ ಚಿತ್ರಣ ಹೊರಬರುತ್ತಿದ್ದಂತೆ, ‘ಬಹುಸಂಖ್ಯಾತ ರೈತರು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ ಎಂಬ ಮತ್ತೊಂದು ಅಪಪ್ರಚಾರ ನಡೆಯುತ್ತಿದೆ. ಆದರೆ, ಯಾವೊಬ್ಬ ರೈತರೂ ತಮ್ಮ ಕೃಷಿ ಭೂಮಿ ನೀಡಲು ಸಿದ್ಧರಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೈರಮಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಾಗರಾಜು ಮಂಡಲಳ್ಳಿ, ಆನಂದ್ ಮತ್ತಿತರರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News