ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ತಲುಪಿಸಲು ಡಿಜಿಟಲ್ ಆರ್ಕೈವ್ಸ್ ಸ್ಥಾಪನೆ ಮಹತ್ವದ ಹೆಜ್ಜೆ : ಬಿಳಿಮಲೆ
ಬೆಂಗಳೂರು : ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ (ಯಕ್ಷಗಾನ ಡಿಜಿಟಲ್ ಆರ್ಕೈವ್ಸ್) ಸ್ಥಾಪನೆಗೆ ತಾವು ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಗುಣವಾಗಿ ಸರಕಾರವು 9.50ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿರುವುದು ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ಸಮಗ್ರವಾಗಿ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಯೋಜನೆಯ ಅನುಷ್ಠಾನದ ಕುರಿತು ಸೋಮವಾರ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಪತ್ರಾಗಾರ ಇಲಾಖೆಯು ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಅದಕ್ಕಾಗಿ ಅಗತ್ಯ ಸಂಖ್ಯೆಯ ಶೈಕ್ಷಣಿಕ ಪರಿಣಿತರು ಹಾಗೂ ಅನುಭವಿ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಘಟಕವೇ ಸ್ಥಾಪನೆಯಾಗಲಿದೆ ಎಂದರು.
ಪತ್ರಾಗಾರ ಇಲಾಖೆಯು ಕೇವಲ ಯಕ್ಷಗಾನ ಕಲೆಯ ದಾಖಲೀಕರಣಕ್ಕೆ ಸೀಮಿತವಾಗದೇ ಅದರ ಮನರಂಜನಾ ಆಯಾಮವನ್ನೂ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಬೇಕೆಂದು ತಾವು ಸಭೆಯಲ್ಲಿ ಸಲಹೆ ನೀಡಿರುವುದಾಗಿ ತಿಳಿಸಿದರು.
ಇದು ಕೇವಲ ದಾಖಲೆಗಳ ಸಂಗ್ರಹಾಲಯವಾಗದೇ ಇಂದಿನ ಕೃತಕಬುದ್ಧಿಮತ್ತೆಯ ಯುಗಕ್ಕೆ ಸಂವಾದಿಯಾಗುವ, ಹೊಸ ತಲೆಮಾರನ್ನು ಆಕರ್ಷಿಸುವ ಹಾಗೂ ಯಕ್ಷಗಾನವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಡಿಜಿಟಲ್ ವೇದಿಕೆಯಾಗಿ ರೂಪುಗೊಳ್ಳಬೇಕಾದ ಅವಶ್ಯಕತೆ ಇದ್ದು, ಈ ದೃಷ್ಟಿಯಿಂದ ಸರ್ಕಾರವು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಮನವರಿಕೆ ಮಾಡಲಾಗಿದೆ ಎಂದರು.
ಕಲೆಯ ಉಳಿವು ಕೇವಲ ಪ್ರದರ್ಶನದಿಂದ ಸಾಧ್ಯವಿಲ್ಲ. ಅದರ ವೈಜ್ಞಾನಿಕ ದಾಖಲೀಕರಣ, ವ್ಯವಸ್ಥಿತ ಸಂಗ್ರಹ, ಬೌದ್ಧಿಕ ಹಕ್ಕುಗಳ ಕುರಿತಾದ ಕಾನೂನುಬದ್ಧ ಒಪ್ಪಂದಗಳು ಮತ್ತು ತಂತ್ರಜ್ಞಾನಾಧಾರಿತ ಪ್ರಸರಣದ ಅವಶ್ಯಕತೆಯನ್ನು ಸಭೆಯಲ್ಲಿ ತಿಳಿಸಿದ್ದೇನೆ. ಇಂತಹ ಪ್ರಯತ್ನಗಳ ಮೂಲಕ ಸ್ಥಳೀಯ ಕಲಾ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸುವುದರ ಜೊತೆಗೆ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿಯೂ ಪರಿಚಯಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಕಾರ್ಯದರ್ಶಿ ಮಂಜುಶ್ರೀ ಎನ್., ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ, ಧನಂಜಯ ಕುಂಬ್ಲೆ ಮತ್ತಿತರರು ಉಪಸ್ಥಿತರಿದ್ದರು.