Bengaluru | ಮೀಟರ್ ರೀಡರ್‌ಗಳಿಗೆ ಕನಿಷ್ಠ ವೇತನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಬೆಂಗಳೂರು : ಕೆಪಿಟಿಸಿಎಲ್ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೀಟರ್ ರೀಡರ್‌ಗಳಿಗೆ ಕನಿಷ್ಠ ವೇತನ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆಯ ವತಿಯಿಂದ ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಮೀಟರ್ ರೀಡಿಂಗ್ ಆಧರಿಸಿ ಪ್ರತಿ ಮೀಟರ್ ಗೆ ಹಣ ಪಾವತಿಸುವ ಪರ್ ಮೀಟರ್ ವೇತನ ಪದ್ಧತಿಯಿಂದ ನೌಕರರು ಶೋಷಣೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಈ ಪದ್ಧತಿಯನ್ನು ರದ್ದುಪಡಿಸಿ, ಮಾಸಿಕ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಮೀಟರ್ ರೀಡರ್ ಗಳು ಪ್ರತಿನಿತ್ಯ ವಿದ್ಯುತ್ ಕಂಬಗಳು, ಮನೆಗಳು ಹಾಗೂ ಅಪಾಯಕಾರಿ ಸ್ಥಳಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಮರ್ಪಕ ವಿಮಾ ಸೌಲಭ್ಯ ಕಲ್ಪಿಸಬೇಕು. ರಜಾ ದಿನಗಳಲ್ಲಿ ಕೆಲಸ ಮಾಡುವವರಿಗೆ ಎರಡುಪಟ್ಟು ವೇತನ ನೀಡಬೇಕು. ಕೆಲಸಕ್ಕೆ ಸೇರುವಾಗ ಹೊರಗುತ್ತಿಗೆ ಸಂಸ್ಥೆಗಳು ಅಥವಾ ಗುತ್ತಿಗೆದಾರರು ಪಡೆದುಕೊಳ್ಳುವ ಮೂಲ ದಾಖಲಾತಿಗಳನ್ನು ಕೂಡಲೇ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ನೌಕರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮೀಟರ್ ರೀಡರ್‍ಗಳ ಬೇಡಿಕೆಗಳು ಎಲ್ಲ ಎಸ್ಕಾಂಗಳಿಗೂ ಸಂಬಂಧಿಸಿದ್ದಾಗಿರುವುದರಿಂದ ಇಂಧನ ಸಚಿವರು ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಅ.15ರೊಳಗೆ ಮುಷ್ಕರ ನಿರತ ವೇದಿಕೆಯ ಪದಾಧಿಕಾರಿಗಳು ಹಾಗೂ ಮಾನವ ಸಂಪನ್ಮೂಲ ಒದಗಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿ ಗೌಡ, ಉಪಾಧ್ಯಕ್ಷ ಪರಶುರಾಮ್ ಬದ್ದಪ್ಪ ರಾಠೋಡ, ಪ್ರದಾನ ಕಾರ್ಯದರ್ಶಿ ನಾಗಪ್ಪ ಭಾವಿಕಟ್ಟಿ ಮತ್ತಿತರರು ಹಾಜರಿದ್ದರು.
‘ಸರಕಾರದ ಸಕಾರಾತ್ಮಕ ಸ್ಪಂದನೆ ಹಾಗೂ ಲಿಖಿತ ಭರವಸೆ ಹಿನ್ನೆಲೆಯಲ್ಲಿ ಮುಷ್ಕರವನ್ನು ಅ.15ರವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಷ್ಟರೊಳಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಅ.16ರಿಂದ 10 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ಸಂಘಟಿಸಿ ಬೃಹತ್ ಹೋರಾಟ ನಡೆಸಲಾಗುವುದು’
-ಲೀಲಾಸಾಗರ್ ಎಂ.ಎಸ್., ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ