‘ಮೇಲ್ಮನೆ ಚುನಾವಣೆ’ ನಾಲ್ಕು ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ವಿಜಯೇಂದ್ರ ವಿಶ್ವಾಸ
ಬೆಂಗಳೂರು : ವಿಧಾನ ಪರಿಷತ್ತಿನ ನಾಲ್ಕೂ ಕ್ಷೇತ್ರಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಆಗ್ನೇಯ ಪದವೀಧರರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್, ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎ.ಪಿ.ರಂಗನಾಥ್ ಲಾಲ್‍ಬಾಗ್ ಬಳಿಯಿಂದ ಪಾದಯಾತ್ರೆಯ ಮೂಲಕ ಶಾಂತಿನಗರದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ಎ.ಪಿ.ರಂಗನಾಥ್ ಮತ್ತು ಕೆ.ಎಂ. ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಯ ವಾತಾವರಣ ತುಂಬಾ ಚೆನ್ನಾಗಿದೆ ಎಂದು ನುಡಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆ ಗೆಲ್ಲಲೇಬೇಕೆಂಬ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ. ಮೇಲ್ಮನೆಯ ಪಾವಿತ್ರ್ಯತೆ ಕಾಪಾಡಬೇಕಾಗಿದೆ. ಇಂತಹ ಉತ್ತಮ ವ್ಯಕ್ತಿಗಳು ಗೆದ್ದು ಬರಬೇಕಿದೆ. ಇವರೆಲ್ಲ ಗೆಲ್ಲಲೇಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಮಾಡುತ್ತೇವೆ ಎಂದು ಅವರು ವಿವರಿಸಿದರು.
ಶಶಿಲ್ ನಮೋಶಿ ಮತ್ತು ಸಂಕನೂರು ನಾಳೆ(ಅ.6) ನಾಮಪತ್ರ ಸಲ್ಲಿಸುತ್ತಾರೆ. 4 ಕ್ಷೇತ್ರಗಳಲ್ಲೂ ಎನ್‍ಡಿಎ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದು ವಿಜಯೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ-ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.