×
Ad

18 ಶಾಸಕರ ಅಮಾನತು ಹಿಂಪಡೆಯಲು ಒತ್ತಾಯಿಸಿ ವಿಧಾನಸೌಧದ ಎದುರು ಬಿಜೆಪಿ ಧರಣಿ

Update: 2025-04-02 11:42 IST

ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

 

ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ, ಅಮಾನತು ಹಿಂಪಡೆಯಲು ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬಿಜೆಪಿ ನಡೆಸುತ್ತಿರುವ ಧರಣಿ ನಡೆಸಿದೆ. ಈ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯ 18 ಶಾಸಕರ ಅಮಾನತು ಕ್ರಮ ಸಂವಿಧಾನಬಾಹಿರ ಎಂದರು.

 

ಜನಪ್ರತಿನಿಧಿಗಳನ್ನು ಆರು ತಿಂಗಳ ಕಾಲ ಅಮಾನತು ಮಾಡಿ, ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಆದೇಶ ಮಾಡಿದ್ದಾರೆ. ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆಯಾಗಿ ಹಾಗೂ ಮುಖ್ಯಮಂತ್ರಿಯನ್ನು ತೃಪ್ತಿಪಡಿಸಲು ಕಾನೂನು ಬಾಹಿರವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿ ಆದೇಶ ಮಾಡಿದ್ದಾರೆ ಎಂದು ಆರೋಪಿಸಿದರು.

ಅಮಾನತು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಸ್ಪೀಕರ್ ಯಾತಕ್ಕೋಸ್ಕರ ಕಾಯುತ್ತಿದ್ದಾರೆ ಎಂದು ಪ್ರಶ್ನಿಸಿದ ವಿಜಯೇಂದ್ರ, ತಮ್ಮ ನಿರ್ಣಯ ಸಂವಿಧಾನ ವಿರೋಧಿ ಎಂಬುದು ಸ್ಪೀಕರ್ ಅವರಿಗೂ ಅರ್ಥವಾಗಿದೆ. ಆದರೂ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಅವರು ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

 

ಇದು ಮತದಾರರಿಗೆ ಮಾಡಿದ ಅವಮಾನ ಎಂದರಲ್ಲದೆ, 18 ಶಾಸಕರ ಅಮಾನತನ್ನು ತಕ್ಷಣ ಹಿಂಪಡೆಯಲು ಆಗ್ರಹಿಸಿದರು. ಅಮಾನತು ಹಿಂಪಡೆಯುವ ವರೆಗೆ ಬಿಜೆಪಿಯ ಶಾಸಕರು ಕಮಿಟಿ ಮೀಟಿಂಗ್ನಲ್ಲಿ ಭಾಗವಹಿಸುವುದಿಲ್ಲ ಎಂದು ಪಕ್ಷದ ನಿರ್ಧಾರವನ್ನು ತಿಳಿಸಿದರು.

ರಾಜ್ಯಪಾಲರ ಭೇಟಿ: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ನಮ್ಮ ನ್ಯಾಯಯುತ ಹೋರಾಟ ಮುಂದುವರಿಯಲಿದೆ. ಮಾನ್ಯ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ಹೇಳಿದರು.

ನಮ್ಮ 18 ಶಾಸಕರನ್ನು ಅಮಾನತು ಮಾಡಿದ್ದೀರಿ. ಸದನ ನಡೆಯದೆ ಇರುವಾಗ ಸ್ಪೀಕರ್ ಪೀಠದಲ್ಲಿ ಕುಳಿತು ನಿಮ್ಮ ಸಂಬಂಧಿಗಳು, ಧರ್ಮಗುರುಗಳ ಜೊತೆ ಫೋಟೊ ತೆಗೆಸಿಕೊಳ್ಳುವುದು ನ್ಯಾಯವೇ? ಇದು ಪ್ರಜಾಪ್ರಭುತ್ವವೇ? ಇಂಥ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಮುಸ್ಲಿಮರಿಗೆ ಶೇ.4 ಮೀಸಲಾತಿ ಮಸೂದೆ ವಿಚಾರದಲ್ಲಿ ಸ್ಪೀಕರ್ ಕುತಂತ್ರ ಮಾಡಿದ್ದಾರೆ. ಸ್ಪೀಕರ್ ಹುದ್ದೆ ಧರ್ಮ- ಮತೀಯ- ಪಕ್ಷಾಧಾರಿತವಲ್ಲ ಎಂದು ವಿವರಿಸಿದರು. ಸ್ಪೀಕರ್ ಖಾದರ್ ಅವರ ನಡೆ ಪ್ರಶ್ನಾರ್ಥಕವಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News