ಆರೆಸ್ಸೆಸ್ ಇದ್ದರೂ ಯುದ್ಧ ನಿಲ್ಲಿಸಿದ್ದೇಕೆ? : ಬಿ.ಕೆ.ಹರಿಪ್ರಸಾದ್
ಬೆಂಗಳೂರು, : ಯುದ್ದಕ್ಕೆ ಮೊದಲು ಮೂರು ದಿನ ಹೇಳಿದರೆ ಆರೆಸ್ಸೆಸ್ ತಯಾರಾಗಲಿದೆ ಎಂದು ಆರೆಸ್ಸೆಸ್ ಹೇಳಿತ್ತು. ಆದರೂ ಏಕೆ ಪಾಕಿಸ್ತಾನದ ವಿರುದ್ಧ ಯುದ್ಧ ನಿಲ್ಲಿಸಿದ್ದಾರೆ ಎಂದು ಹರಿಯಾಣ ಕಾಂಗ್ರೆಸ್ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧ ವಿರಾಮದಿಂದ ಇಡೀ ದೇಶಕ್ಕೇ ಬೇಸರವಾಗಿದೆ. ಪಾಕಿಸ್ತಾನದವರು ಭಾರತದ ಕಡೆ ಕಣ್ಣೆತ್ತಿ ನೋಡದಂತೆ ಆಗುತ್ತದೆ ಎಂದು ದೇಶದ ನಿವಾಸಿಗಳು ಕಾದಿದ್ದರು. ಆದರೆ ಈಗ ಏಕೆ ಈ ರೀತಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಉತ್ತರಿಸಬೇಕು ಎಂದರು.
ಈ ಕೂಡಲೇ ಜಂಟಿ ಸದನ ಕರೆದು ಮಾತನಾಡಬೇಕು. ಅಲ್ಲದೆ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ನಮಗಿತ್ತು. ಆದರೆ ಅದು ಈಗ ಕೈತಪ್ಪಿ ಹೋಗಿದೆ. ಪಿಒಕೆ ವಶಪಡಿಸಿಕೊಳ್ಳುತ್ತೇವೆ ಎಂದಿದ್ದರು. ಆ ಆಸೆಗೆ ತಣ್ಣೀರು ಎರಚಿದಂತಾಗಿದೆ. ಮೂರನೆಯರು ತಲೆಹಾಕುವಂತಹ ದುರ್ಬಲರು ನಾವಲ್ಲ. ದೇಶದ ಏಕತೆ, ಸಮಗ್ರತೆ ಮುಖ್ಯ ಎಂದು ಅವರು ಹೇಳಿದರು.
ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣ ಸ್ವಾಮಿ, ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಮತ್ತಿತರ ಪ್ರಮುಖರಿದ್ದರು.
ನಾಯಕತ್ವದ ಕೊರತೆ ಇದೆ
ಐಎಂಎಫ್ ಅವರು ಪಾಕಿಸ್ತಾನಕ್ಕೆ 1.2 ಬಿಲಿಯನ್ ಸಾಲ ನೀಡುತ್ತಾರೆ. ಇದನ್ನು ಭಾರತ ದೇಶದಿಂದ ನಿಲ್ಲಿಸಲು ಸಹ ಆಗಲಿಲ್ಲ. ನಮ್ಮ ಪರವಾಗಿ ಇದ್ದಂತಹ ಟರ್ಕಿ, ಇರಾನ್, ಸೌದಿ ಅರೇಬಿಯಾ ದೇಶಗಳು ನಮ್ಮ ಪರವಾಗಿ ಮಾತನಾಡದೇ ಇದ್ದಿದ್ದು ನೋಡಿದರೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂದು ಹರಿಪ್ರಸಾದ್ ಉಲ್ಲೇಖಿಸಿದರು.