ಬೆಂಗಳೂರು : ಆರೋಗ್ಯ ಸೇವೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಕಂಪೆನಿಯಾಗಿರುವ ಜರ್ಮನಿ ಮೂಲದ ಬೇಯರ್ ಸೈನ್ಸ್ ಅಂಡ್ ಇನ್ನೋವೇಶನ್ ಬೆಂಗಳೂರಿನ ಸಮೀಪ ತನ್ನ ಅತ್ಯಾಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ 200 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, ಈ ಸಂಬಂಧ ರಾಜ್ಯ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಶುಕ್ರವಾರ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಬೇಯರ್ ಕಂಪೆನಿಯ ಸಿಎಫ್‍ಓ ವಿನೀತ್ ಜಿಂದಾಲ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ್, ಬೇಯರ್ ಕಂಪೆನಿಯು ಮುಂದಿನ 7 ವರ್ಷಗಳಲ್ಲಿ ಹಂತ ಹಂತವಾಗಿ ಈ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ. ತಾವು ಇತ್ತೀಚೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ನೆದಲೆರ್ಂಡ್ಸ್ ಪ್ರವಾಸ ಕೈಗೊಂಡಿದ್ದಾಗ ಆಮ್ಸ್ಟರ್ ಡ್ಯಾಮ್‍ನಲ್ಲಿ ಕಂಪೆನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿತ್ತು. ಈ ಹೂಡಿಕೆಯಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮಾಹಿತಿ ನೀಡಿದರು.

ಕಂಪೆನಿಯು ಮುಂದಿನ ವರ್ಷದ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಯೋಜನೆಯ ಭೂಮಿಪೂಜೆ ನೆರವೇರಿಸಲು ಬಯಸಿದ್ದು, ತ್ವರಿತವಾಗಿ ತಯಾರಿಕೆ ಚಟುವಟಿಕೆಗಳನ್ನು ಆರಂಭಿಸಲು ಉತ್ಸುಕವಾಗಿದೆ. ಕಂಪೆನಿಯು ಈಗಾಗಲೇ ಬೆಂಗಳೂರಿನಲ್ಲಿ ತನ್ನ ಸೇವಾ ಮತ್ತು ನಾವೀನ್ಯತೆಯ ಹಬ್ ಹಾಗೂ ಚಾಮರಾಜನಗರದಲ್ಲಿ ಬೆಳೆ ಪರೀಕ್ಷಾ ಕೇಂದ್ರವನ್ನು ಹೊಂದಿದೆ.

ಭಾರತದಲ್ಲಿ ಇದು 125 ವರ್ಷಗಳಿಂದಲೂ ಇದ್ದು 11 ಸಾವಿರ ಜನರಿಗೆ ಕೆಲಸ ಕೊಟ್ಟಿದೆ. ದೇಶದಲ್ಲಿ ಬೇಯರ್ ಕಂಪೆನಿಯು 7 ಉತ್ಪಾದನಾ ಸ್ಥಾವರಗಳು ಮತ್ತು 3 ಜಿಇಸಿ ಕೇಂದ್ರಗಳನ್ನು ಹೊಂದಿದೆ ಎಂದು ಅವರು ನುಡಿದರು. ಈ ವೇಳೆ ಕೈಗಾರಿಕಾ ಇಲಾಖೆಯ ಆಯುಕ್ತೆ ಖುಷ್ಬೂ ಗೋಯಲ್ ಚೌಧರಿ, ಕೆಐಎಡಿಬಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor