ಇಂದುಶೇಖರ್(52)

ಬೆಂಗಳೂರು : ಪತ್ನಿಯೊಂದಿಗೆ ದೀರ್ಘಕಾಲದ ವೈಮನಸ್ಸು ಹೊಂದಿದ್ದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ, ಅತ್ತೆ ಹಾಗೂ ಆಕೆಗೆ ಬೆಂಬಲವಾಗಿ ನಿಂತಿದ್ದ ಸಂಬಂಧಿಕರು ಸೇರಿದಂತೆ ಏಳು ಮಂದಿಯನ್ನು  ಹತ್ಯೆ ಮಾಡಿದ್ದು, ಆರೋಪಿಯನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶ್ರೀರಾಮಪುರದ ನಿವಾಸಿ ಇಂದುಶೇಖರ್(52) ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಅತ್ತೆ ರೂಪವತಿ(65), ಆಕೆಯ ಮಗಳು, ಪತ್ನಿ ಸುನೀತಾ(40), ರೂಪವತಿ ಪುತ್ರರಾದ ಶಂಕರ್(44) ಹಾಗೂ ಶಿವಕುಮಾರ್(30) ಮತ್ತು ಸೊಸೆಯಂದಿರಾದ ದಿವ್ಯಾ(30) ಮತ್ತು ನಳಿನಿ(29) ಹಾಗೂ ಮೊಮ್ಮಗ ಪುನೀತ್(7) ಅವರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಾಗಿದ್ದ ಇಂದುಶೇಖರ್, ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದನು. ಆರೋಪಿಯು ತನ್ನ ಪತ್ನಿ ತವರು ಮನೆಯವರೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದನು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದು, ಆರೋಪಿಗೆ ಮತ್ತಷ್ಟು ಕೋಪ ತರಿಸಿತ್ತು.

ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ, ಮೊದಲು ಪತ್ನಿಯನ್ನು ತನ್ನ ಮನೆಯಲ್ಲೇ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಆಕೆಯ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಮದ್ಯಪಾನದ ನೆಪದಲ್ಲಿ ಬಾಮೈದರಾದ ಶಿವಕುಮಾರ್ ಮತ್ತು ಶಂಕರ್‍ನನ್ನು ಕೊಲೆ ಮಾಡಿದ್ದಾನೆ. ನಂತರ ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ ಬಾಲಕ ಪುನೀತ್‍ನನ್ನು ಸೇರಿದಂತೆ 20 ದಿನಗಳಿಂದ ಒಬ್ಬೊಬ್ಬರನ್ನೇ ಕರೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಮಾಡಿದ ನಂತರ ಒಂದೊಂದೇ ಶವಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ನಗರದ ಹೊರವಲಯದ ನಂದಿಬೆಟ್ಟ, ಚಾರ್ಮಾಡಿ ಘಾಟ್, ತಮಿಳುನಾಡಿನ ಸೇಲಂ ಬಳಿ ಇರುವ ಎರ್ಕಾಡ್ ಘಾಟ್, ಚಾಮುಂಡಿಬೆಟ್ಟ, ಶಿರಾಡಿಘಾಟ್ ಸೇರಿದಂತೆ ಮುಂತಾದ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಬೀಸಾಡಿರುವುದಾಗಿ ಆರೋಪಿ ಇಂದುಶೇಖರ್ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.

ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಇಂದುಶೇಖರ್‍ನನ್ನು ವಿಚಾರಣೆಗೊಳಪಡಿಸಿದ್ದಾರೆ. ಆತ ನೀಡಿದ ಗೊಂದಲಕಾರಿ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದ್ದವು. ಹೀಗಾಗಿ ಪೊಲೀಸರು ಆತನ ಮನೆಯ ಪರಿಶೀಲನೆ ನಡೆಸಿದಾಗ ಹತ್ಯೆಗೆ ಸಂಬಂಧಿಸಿದ ಸುಳಿವುಗಳು ಲಭ್ಯವಾಗಿವೆ. ತೀವ್ರ ವಿಚಾರಣೆ ವೇಳೆ ಆರೋಪಿಯು ಸರಣಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಇದು ಅತ್ಯಂತ ಗಂಭೀರ ಪ್ರಕರಣ. ನಾಪತ್ತೆ ಪ್ರಕರಣದ ತನಿಖೆ ನಡೆಸಿದಾಗ ಈ ಭೀಕರ ಹತ್ಯಾಕಾಂಡದ ಕುರಿತು ಬಯಲಾಗಿದೆ. ಸದ್ಯ ಆರೋಪಿ ನೀಡುತ್ತಿರುವ ಮಾಹಿತಿ ಆಧರಿಸಿ, ಬೆಂಗಳೂರು ಪೊಲೀಸ್ ತಂಡಗಳು ಹೊರ ಜಿಲ್ಲೆಗಳೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದರು.

ಸದ್ಯ ಪುನೀತ್‍ನ ಮೃತದೇಹ ಪತ್ತೆಯಾಗಿದೆ. ಉಳಿದ ಆರು ಮಂದಿಯ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಮೃತದೇಹ ಸಾಗಿಸಲು ಬಳಸಿದ್ದ ಕಾರು ಹಾಗೂ ಹತ್ಯೆಗೆ ಬಳಿಸಿದ್ದ ರುಬ್ಬುಗುಂಡನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಯ ವಿರುದ್ಧ ಆರು ವರ್ಷಗಳ ಹಿಂದೆ ಸರಗಳ್ಳತನ ಪ್ರಕರಣವೂ ದಾಖಲಾಗಿತ್ತು. 2018ರಲ್ಲಿ ದರೋಡೆ ಪ್ರಕರಣವೊಂದರಲ್ಲಿ ಆರೋಪಿ ಬಂಧಿತನಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಕೊಲೆಯಾದ ರೂಪವತಿಯ ಮತ್ತೊಬ್ಬ ಅಪ್ರಾಪ್ತ ಮೊಮ್ಮಗ ಆರೋಪಿಯ ಕಾರಿನಲ್ಲಿ ಪತ್ತೆಯಾಗಿದ್ದು, ಬಾಲಕನ ಹತ್ಯೆಗೂ ಸಂಚು ರೂಪಿಸಿದ್ದನು. ಆದರೆ, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ಕೃತ್ಯಕ್ಕೆ ಆರೋಪಿ ತನ್ನ ಅಪ್ರಾಪ್ತ ಮಗಳ ಸಹಾಯ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಬಾಲಕಿಯನ್ನೂ ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣವನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ತರುವ ನಿಟ್ಟಿನಲ್ಲಿಯೂ ತ್ವರಿತ ಕ್ರಮ ಕೈಗೊಳ್ಳುತ್ತಿದ್ದೇವೆ’

-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor