ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಅನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಇದರ ಜತೆಗೆ, ಪ್ರತಿ ಜಿಲ್ಲೆಗಳಲ್ಲೂ ಗೃಹಲಕ್ಷ್ಮೀ ಕುರಿತು ಬೃಹತ್ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳೊಂದಿಗೆ ನಡೆದ ಸಂವಾದದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಗೆ 86ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು 1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮೀಯರ ಸಮಾವೇಶ ಮಾಡಲಾಗುವುದು. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ಮಡಿಲಿಗೆ ನಾನು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ 2ಸಾವಿರ ರೂಪಾಯಿಗಳನ್ನಿಟ್ಟು ಈ ಗೃಹಲಕ್ಷ್ಮಿಯೋಜನೆಯನ್ನು ಜಾರಿ ಮಾಡುವ ಶಕ್ತಿ ಕೊಡಮ್ಮ ಎಂದು ಪ್ರಾರ್ಥಿಸಿದ್ದೆವು. ಜನರು ನಮಗೆ 136 ಸೀಟುಗಳೊಂದಿಗೆ ಆಶೀರ್ವಾದ ಮಾಡಿದರು ಎಂದು ತಿಳಿಸಿದರು.

ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಸೌಲಭ್ಯ ತಲುಪುತ್ತಿದೆ. ಗೃಹಜ್ಯೋತಿ ಯೋಜನೆಯನ್ನು ಬೆಳಗಾವಿಯಲ್ಲಿ, ನಂತರ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಯುವನಿಧಿ ಯೋಜನೆ, ಪ್ರಿಯಾಂಕಾ ಗಾಂಧಿ ಭೇಟಿ ನೀಡಿದಾಗ ಗೃಹಲಕ್ಷ್ಮೀ ಹೀಗೆ ಎಲ್ಲ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಚುನಾವಣೆಯ ಸಂದರ್ಭದಲ್ಲಿ ನೀಡಿದ್ದೆವು ಎಂದು ಅವರು ನೆನೆದರು.

ನಮ್ಮ ರಾಜ್ಯದಲ್ಲಿ ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ವೃದ್ಧಾಪ್ಯ ವೇತನ ಯೋಜನೆ ಜಾರಿಗೆ ತಂದರು. ಅದನ್ನು ನಿಲ್ಲಿಸಲು ಸಾಧ್ಯವಾಯಿತೇ? ಬೇರೆ ರಾಜ್ಯಗಳನ್ನು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಮಾಡಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಯಾರೂ ಜಾರಿಗೆ ತಂದಿಲ್ಲ ಎಂದು ಅವರು ತಿಳಿಸಿದರು.

ಸಂವಾದದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷತೆ ಪದ್ಮಾವತಿ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕ ಡಾ.ಮಹೇಶ್ ಬಾಬು ಸೇರಿದಂತೆ ಪ್ರಮುಖರಿದ್ದರು.

ಸಿಎಂ ಕಚೇರಿಯಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಹರ್ಷೋದ್ಗಾರ

ಗೃಹಣಿಯರಿಗೆ ಮಾಸಿಕ 2 ಸಾವಿರ ರೂ. ನಗದು ನೀಡುವ ರಾಜ್ಯ ಕಾಂಗ್ರೆಸ್ ಸರಕಾರದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದೆಯೇ ತಮಗೆ ಯೋಜನೆದಿಂದಾಗಿ ಆಗುತ್ತಿರುವ ಲಾಭಗಳು, ಹಣಕಾಸಿನ ಕಷ್ಟಕರದಿಂದ ಹೊರಬಂದ ಸಂಗತಿಗಳನ್ನು ಬಿಚ್ಚಿಟ್ಟು ಹತ್ತಾರು ಮಹಿಳೆಯರ ಮುಖದಲ್ಲಿ ನಗೆ ಬೀರಿದ ದೃಶ್ಯಕ್ಕೆ ಸಿಎಂ ಕಚೇರಿ ಸಾಕ್ಷಿಯಾಯಿತು.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡ ಫಲಾನುಭವಿ ಮಹಿಳೆಯರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಯೋಜನೆಯಿಂದಾಗಿ ಗೃಹಣಿಯರು ಬದುಕು ಕಟ್ಟಿಕೊಂಡಿರುವ ಪರಿಯನ್ನು ವಿವರಿಸಿದರು. ಇದೇ ವೇಳೆ ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಖುದ್ದು ಖರೀದಿಸಿ ಸಿಎಂ ಗಮನ ಸೆಳೆದರು.

ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮೀ ಹಣದಿಂದ ಸುಮಾರು 59 ಸಾವಿರದಷ್ಟು ಶುಲ್ಕ ಪಾವತಿಸಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಭಾವುಕತೆಯಲ್ಲಿ ಮಿಂದೆದ್ದಿತು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರಿಯ ಮಹಿಳೆಯೊಬ್ಬರು, ಗೃಹಲಕ್ಷ್ಮೀಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ ಎಂದು ಭಾವುಕರಾಗಿ ನುಡಿದರು. ಇತ್ತ ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮೀ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. ಗೃಹಲಕ್ಷ್ಮೀ ಹಣದೊಂದಿಗೆ ತಮ್ಮ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ, ವ್ಯಾಪಾರ ವಿಸ್ತರಿಸಲು ಅನುಕೂಲವಾಯಿತು. ತಾವು ತಯಾರಿಸಿದ ಚಕ್ಕುಲಿ, ಕೋಡುಬಳೆ ಮತ್ತಿತರ ಉತ್ಪನ್ನಗಳನ್ನು ಈಗ ಹೊರರಾಜ್ಯ, ಹೊರದೇಶಗಳಿಗೂ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾಗಿರುವ ಮಹಿಳೆಯೊಬ್ಬರು, ಪಕ್ಷದ ಕೆಲಸದಲ್ಲಿ ಭೇಟಿಯಾಗಲು ಆಗಲಿಲ್ಲ. ಆದರೆ ಈಗ ಗೃಹಲಕ್ಷ್ಮೀ ಫಲಾನುಭವಿಯಾಗಿ ನನಗೆ ತಮ್ಮನ್ನು ಭೇಟಿಯಾಗುವ ಸೌಭಾಗ್ಯ ದೊರೆಯಿತು ಎಂದು ಹರ್ಷಿಸಿದರು. 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇಲ್ಲ. ಆದರೆ ಗೃಹಲಕ್ಷ್ಮೀ ಯೋಜನೆಯನ್ನು ತಾವು ಪಕ್ಷಾತೀತವಾಗಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಸ್ಥಳೀಯ ಮಹಿಳೆಯರ ಅಭಿಪ್ರಾಯವೇನು? ಎಂದು ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳೆ ಕಾಂಗ್ರೆಸ್ ಸರಕಾರದ ಬಗ್ಗೆ ಮಹಿಳೆಯರಲ್ಲಿ ಮೆಚ್ಚುಗೆ ಇದೆ ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor