ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಸಂಪರ್ಕವನ್ನು ಬಲಪಡಿಸಲು ಕ್ರಮ : ವಿ.ಎಸ್.ಆರಾಧ್ಯ
ಬೆಂಗಳೂರು : ನಗರದ ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‍ಗಳ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮೆಟ್ರೋ ಫೀಡರ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಕೆ.ಜಿ. ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಟನೆ (ಎಫ್‍ಕೆಸಿಸಿಐ) ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಸಾರಿಗೆ ಅಭಿವೃದ್ಧಿ ಸಂವಾದ’ದಲ್ಲಿ ಮಾತನಾಡಿದ ಅವರು, ಬಿಎಂಟಿಸಿ ಪ್ರಯಾಣಿಕರಿಗೆ ತಡೆರಹಿತ ‘ಡೋರ್–ಟು–ಡೋರ್’ ಸಂಪರ್ಕವನ್ನು ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
150 ಬಸ್‍ಗಳ ಸಣ್ಣ ದಳದಿಂದ ಆರಂಭವಾದ ಬಿಎಂಟಿಸಿ ಸಂಸ್ಥೆ ಇಂದು ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುವ ಮಹಾನಗರ ಸಾರಿಗೆ ನಿಗಮವಾಗಿ ಬೆಳೆದಿದೆ. ರಾಜ್ಯ ಸರಕಾರದ ನಿರಂತರ ಹೂಡಿಕೆ ಮತ್ತು ಮೂಲಸೌಕರ್ಯ ಬೆಂಬಲ ಬಿಎಂಟಿಸಿಯ ಅಭಿವೃದ್ಧಿಗೆ ಕಾರಣವಾಗಿದೆ. ಈಗ 1700ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳು ನಗರ ವಿವಿಧ ಮಾರ್ಗಗಳಲ್ಲಿ ಚಲಿಸುತ್ತಿದೆ ಎಂದು ಅವರು ವಿವರಿಸಿದರು.
ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಕೈಗಾರಿಕಾ ವಲಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಎಫ್‍ಕೆಸಿಸಿಐನೊಂದಿಗೆ ಮುಂದಿನ ದಿನಗಳಲ್ಲಿ ನೀತಿ ಸಂವಾದ, ಸಂಯುಕ್ತ ಯೋಜನೆಗಳು ಮತ್ತು ಸಲಹಾ ಸಹಕಾರ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.