ಜಿಲ್ಲಾ ಮಟ್ಟದ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಸಿದ್ದ : ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್
ಬೆಂಗಳೂರು : ರಾಜ್ಯದ ಎಲ್ಲ ಇಲಾಖೆಗಳಲ್ಲಿಯೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಪಾತ್ರ ಇದ್ದು, ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾಮಟ್ಟದ ಯೋಜನೆಗಳನ್ನು ರೂಪಿಸಿ, ಅನುಷ್ಠಾನ ಮಾಡಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನದೆ ಕೆಲವು ಆಲೋಚನೆಗಳನ್ನು ವಿಷಯ ತಜ್ಞರೊಂದಿಗೆ ಚರ್ಚೆ ಮಾಡಲಾಗುವುದು. ನಂತರ ಅವನ್ನು ಅಧ್ಯಯನ ಮಾಡಿ, ಸರಕಾರದ ನೀತಿಗಳ ಅನುಗುಣವಾಗಿ ರಾಜ್ಯವು ದೇಶಕ್ಕೆ ಮಾದರಿಯಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸಕ್ರಿಯವಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಆಯವ್ಯಯ ಮಂಡನೆಯ ಪೂರ್ವದಲ್ಲಿ ವಿಸ್ತೃತವಾದಂತಹ ಸುಭದ್ರ ಆರ್ಥಿಕ, ಸಾಮಾಜಿಕ ಮತ್ತು ಇನ್ನಿತರ ಪ್ರಮುಖ ವಲಯಗಳನ್ನು ದೃಷ್ಟಿಯಲ್ಲಿರಿಸಿಕೊಂಡ ಸರಕಾರಕ್ಕೆ ಆಯೋಗವು ವರದಿಯನ್ನು ಸಲ್ಲಿಸಲಿದೆ ಎಂದು ಅವರು ತಿಳಿಸಿದರು.
ಅಯೋಗವು ಸಾಕ್ಷ್ಯಾಧಾರಿತ ನೀತಿ, ಕಾರ್ಯತಂತ್ರದ ಸೂತ್ರೀಕರಣ, ವಿಕೇಂದ್ರೀಕೃತ ಯೋಜನೆ ಮತ್ತು ಫಲಿತಾಂಶ ಆಧಾರಿತ ಆಯವ್ಯಯಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಮಟ್ಟದ ವಲಯ ಮತ್ತು ಅಂತರಾಜ್ಯ ಪ್ರಾದೇಶಿಕ ಯೋಜನೆ, ರಾಜ್ಯಮಟ್ಟದ ವಲಯ ಮತ್ತು ಅಂತರ್ ಜಿಲ್ಲಾ-ಉಪವಲಯ ಯೋಜನೆ, ಜಿಲ್ಲಾಮಟ್ಟದ ವಲಯ ಯೋಜನೆ, ಬ್ಲಾಕ್‍ಮಟ್ಟದ ವಲಯ ಯೋಜನೆ ಮತ್ತು ಪಂಚಾಯತ್‍ಮಟ್ಟದ ಗ್ರಾಮೀಣ ಯೋಜನೆಗಳನ್ನು ಆಯೋಗವು ರೂಪಿಸುತ್ತಿದೆ ಎಂದು ಅವರು ತಿಳಿಸಿದರು.
ಭೂ ಸುಧಾರಣಾ ಕಾಯ್ದೆಗೆ ಅಗತ್ಯವಾದ ತಿದ್ದುಪಡಿಗಳನ್ನು ತರಬೇಕಾಗಿದೆ. ಬೂಮಿಯಲ್ಲಿ ಇಂತಿಷ್ಟು ಅರಣ್ಯಕ್ಕೆ ಮೀಸಲಿಡಬೇಕು ಎಂದು ತಿದ್ದುಪಡಿ ತರಬೇಕಾಗಿದೆ. ಇದರಿಂದ ಕುಸಿಯುತ್ತಿರುವ ಅಂತರ್ಜಲವು ಹೆಚ್ಚಾಗಲಿದೆ ಎಂದು ಬಿ.ಆರ್. ಪಾಟೀಲ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸರಕಾರದ ಕಾರ್ಯದರ್ಶಿ ಡಾ. ವಿಶಾಲ್ ಆರ್ ಇದ್ದರು.