ಗಡಿಭಾಗದಲ್ಲಿ ಉದ್ಯಮಿ ಗೋಪಾಲ್ ಹತ್ಯೆ ಪ್ರಕರಣ : ಸಿಐಡಿ ತನಿಖೆಗೆ ಸೂಚನೆ
ಜಿ.ಪರಮೇಶ್ವರ್
ಬೆಂಗಳೂರು, ಮಾ. 10: ಹೊಸೂರು ವ್ಯಾಪ್ತಿಯ ತಮಿಳುನಾಡು ಗಡಿ ಭಾಗದಲ್ಲಿ ನಡೆದಿರುವ ಗೋಪಾಲ್ ಎಂಬುವರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆ ನಡೆಸಲು ಸೂಚನೆ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರದೀಪ್ ಈಶ್ವರ್ ವಿಷಯ ಪ್ರಸ್ತಾಪಿಸಿ ಆನೇಕಲ್ ಬಳಿಯ ತಮಿಳುನಾಡಿನ ಗಡಿಯಲ್ಲಿ ಗೋಪಾಲ್ ಎಂಬುವರನ್ನು ಹತ್ಯೆ ಮಾಡಲಾಗಿದೆ. ಮೃತರ ಕುಟುಂಬದ ಸದಸ್ಯರು ಪೊಲೀಸ್ ಠಾಣೆಯ ಮುಂದೆ ಎರಡು ದಿನಗಳ ಕಾಲ ಧರಣಿ ನಡೆಸಿದ ಪರಿಣಾಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರನ್ನು ಬಂಧಿಸಲಾಗಿದೆ. ಆದರೆ, ಇದೊಂದು ಗಂಭೀರ ಪ್ರಕರಣವಾಗಿದ್ದು, ಉನ್ನತ ಮಟ್ಟದಲ್ಲಿ ಸಿಐಡಿ ತನಿಖೆ ನಡೆಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಲಭ್ಯ ಇರುವ ಪ್ರಾಥಮಿಕ ಮಾಹಿತಿ ಆಧರಿಸಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಪ್ರಕಟಿಸಿದರು.