ದಿಲ್ಲಿಯಲ್ಲಿ ಡಿಸಿಎಂಗೆ ಸಿಹಿ ಸುದ್ದಿ ಸಿಕ್ಕಿರಬಹುದು : ಆರ್.ಅಶೋಕ್
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೊಸದಿಲ್ಲಿಯ ಭೇಟಿಯ ವೇಳೆ ಸಿಹಿ ಸುದ್ದಿ ಸಿಕ್ಕಿರಬಹುದು. ಅದಕ್ಕಾಗಿ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಅನ್ನು ಬೆಂಬಲಿಸುವ ಮಾತುಗಳನ್ನಾಡಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪ್ರಸ್ತಾಪಿಸಿದ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೆ ಸಾಲಿನ ಬಜೆಟ್ ಖಾಲಿ ಚೊಂಬು ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಜೆಟ್ ಪ್ರತಿಯನ್ನು ಪೂರ್ತಿ ಓದಿದ ಬಳಿಕ ಅದಕ್ಕೆ ಪ್ರತಿಕ್ರಿಯಿಸುವುದು ಒಪ್ಪಬಹುದಾದ ವಿಷಯ. ಆದರೆ ಬಜೆಟ್ ಅನ್ನು ಅರ್ಧ ಭಾಗವೂ ಓದಿಲ್ಲ. ಆಗಲೇ ಬಿಜೆಪಿಯವರು ವಿಧಾನಸೌಧದ ವರೆಗೆ ಖಾಲಿ ಚೆಂಬು ಹಿಡಿದು ಪ್ರತಿಭಟಿಸಿದ್ದಾರೆ. ಇದು ಪೂರ್ವ ನಿಯೋಜಿತ ಅಲ್ಲವೇ ಎಂದು ಪ್ರಶ್ನಿಸಿದ್ದರು.
ಬಜೆಟ್ ಓದುತ್ತಿರುವಾಗ ಅದರಲ್ಲಿ ಏನೂ ಇಲ್ಲ ಎಂದು ಗ್ರಹಿಸಿಕೊಂಡು ಆಗ ಮಾರುಕಟ್ಟೆಯಿಂದ ಚೊಂಬುಗಳನ್ನು ತರಿಸಿದರೆ ನಂಬಬಹುದಿತು. ಆದರೆ ಬಿಜೆಪಿಯವರು ಮೊದಲೇ ಪೂರ್ವ ನಿರ್ಧರಿತರಾಗಿ ಚೊಂಬು ತಂದಿದ್ದು, ಇದು ರಾಜಕೀಯ ಟೀಕೆಯಾಗಿದೆ. ಅಲ್ಲದೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಅನ್ನು ನಾವು ಖಾಲಿ ಡ್ರಮ್ ಎಂದು ಕರೆಯಬಹುದೇ ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಅರವಿಂದ ಬೆಲ್ಲದ್, ಹೊಸದಿಲ್ಲಿಗೆ ಹೋಗಿ ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ಸಿಕ್ಕಿರಬಹುದು. ಅದಕ್ಕಾಗಿ ಈಗ ಸಿದ್ದರಾಮಯ್ಯ ಅವರ ಪರವಾಗಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ಉಲ್ಲೇಖಿಸಿದರು.