×
Ad

ಮಾಧ್ಯಮ ಒಂದು ಸರಕಾರವನ್ನು ತರುವ ಹಾಗೂ ಉರುಳಿಸುವಷ್ಟು ಶಕ್ತಿಶಾಲಿ : ಎಚ್.ವಿಶ್ವನಾಥ್

ಪತ್ರಕರ್ತ ಜಿ.ಮಹಾಂತೇಶ್ ಅವರು ಸಂಪಾದಿಸಿರುವ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ

Update: 2026-03-09 23:09 IST

ಬೆಂಗಳೂರು : ನಾನು ಮಾಧ್ಯಮಗಳಿಂದಾಗಿ ಬೆಳೆದಿದ್ದೇನೆ. ಜನತಂತ್ರ ವ್ಯವಸ್ಥೆಯಲ್ಲಿ ಒಬ್ಬ ಜನ ನಾಯಕ ಬೆಳೆಯಬೇಕಾದರೆ ಅದು ಮಾಧ್ಯಮದಿಂದ ಸಾಧ್ಯ. ಮಾಧ್ಯಮ ಒಂದು ಸರಕಾರವನ್ನು ತರುವ ಹಾಗೂ ಉರುಳಿಸುವಷ್ಟು ಶಕ್ತಿಶಾಲಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

ಸೋಮವಾರ ಪಾರದರ್ಶಕ ಮೀಡಿಯಾ ಫೌಂಡೇಷನ್ ವತಿಯಿಂದ ನಗರದ ದಿ ಫೈಲ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಕರ್ತ ಜಿ.ಮಹಾಂತೇಶ್ ಅವರು ಸಂಪಾದಿಸಿರುವ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇವತ್ತು ಸರಕಾರದ ವಿಶೇಷವೇ ‘ಭೂ ಕಬಳಿಕೆ’ಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ. ರಿಯಲ್ ಎಸ್ಟೇಟ್‍ಗೆ ಮಾತ್ರ ತೆರಿಗೆ ಹಾಕಿಲ್ಲ. ಸಾವಿರಾರು ಕೋಟಿ ರೂ. ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತಿದೆ. ಸಾಮಾನ್ಯ ಜನರಿಗೆ ನೀರು, ವಿದ್ಯುತ್ ಸೇರಿ ಎಲ್ಲದರ ಮೇಲೆಯೂ ತೆರಿಗೆ ಇದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಿಕೆಗಳ ಮೂಲಕ ಜನರಲ್ಲಿ ಎಷ್ಟೊಂದು ಎಚ್ಚರಿಕೆ ಮೂಡಿಸುವ ಕೆಲಸ ಮಾಡಿದ್ದಾರೆ. ಭಾರತದಂತಹ ದೇಶದಲ್ಲಿ ಅಹಿಂಸಾತ್ಮಕ ರಾಷ್ಟ್ರೀಯ ಚಳವಳಿಗೆ ಒಂದು ಅಸ್ತ್ರವಾಗಿದ್ದು ಪತ್ರಿಕೆಗಳು. ಸ್ವಾತಂತ್ರ್ಯ ಬಂದ ನಂತರ ಪತ್ರಿಕಾರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ ಎಂದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕೆಗಳಿಗೆ ಮುಖ್ಯ ಸ್ಥಾನ ಸಿಕ್ಕಿತು. ಬ್ರಿಟೀಷರು ಕೂಡ ಪತ್ರಿಕೆಗಳಿಗೆ ಭಯಪಡುತ್ತಿದ್ದರು. ಅದಕ್ಕೆ ಪತ್ರಿಕೆಗಳನ್ನು ನಿಯಂತ್ರಿಸುವ ಕಾನೂನುಗಳನ್ನು ತಂದರು. ಅದಕ್ಕೆ ಇನ್ನೊಂದಿಷ್ಟು ಅಸ್ತ್ರಗಳನ್ನು ಸೇರಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ವಿರೋಧಿಸಲಾಗುತ್ತಿತ್ತು ಎಂದರು.

ಇಂದಿಗೂ ಮಾಧ್ಯಮ ಒಂದು ಅಸ್ತ್ರವಾಗಿಯೇ ಇದೆ. ಇವತ್ತು ಮಾಧ್ಯಮ ಬೃಹತ್ತಾಗಿ ಬೆಳೆದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಬೇಕಿದ್ದ ಮಾಧ್ಯಮ ಅನೇಕ ಕಡೆ, ತೊಡೆಯ ಮೇಲೆ ಕೂರುವ ಮುದ್ದು ನಾಯಿಯಾಗಿದೆ. ಆದರೂ ಕೂಡ ಮಾಧ್ಯಮಕ್ಕೆ ಒಂದು ಶಕ್ತಿಯಿದೆ. ಮಾಧ್ಯಮ ಯಾವಗಲೂ ವಿರೋಧ ಪಕ್ಷದ ಸ್ಥಾನದಲ್ಲಿ ಇರಬೇಕು. ಅದನ್ನು ನಾವು ಎಂದಿಗೂ ಮರೆಯಬಾರದು ಎನ್ನುವುದನ್ನು ಜಿ.ಮಹಾಂತೇಶ್ ಅವರು ತೋರಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಟಿ.ಕೆ.ತ್ಯಾಗರಾಜ್, ಕೃತಿಯ ಸಂಪಾದಕ ಜಿ.ಮಹಾಂತೇಶ್, ಪಾರದರ್ಶಕ ಮೀಡಿಯಾ ಫೌಂಡೇಷನ್‍ನ ನಿರ್ದೇಶಕ ಮಲ್ಲಿಕಾರ್ಜುನ ಭಟ್ಟರಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News