ಮನೆ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ : ಶಾಸಕ ಬಿ.ಎನ್.ರವಿಕುಮಾರ್
ಬೆಂಗಳೂರು : ವಸತಿ ಇಲಾಖೆಯಡಿ ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪದೇ ಪದೇ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂದು ವಿಧಾನಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಧ್ವನಿ ಎತ್ತಿದ ಪ್ರಸಂಗ ಜರುಗಿತು.
ಸೋಮವಾರ ವಿಧಾನಸಭೆಯ ಪ್ರಶೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪ ಮಾಡಿದ ಬಿ.ಎನ್.ರವಿಕುಮಾರ್ ಅವರು, ವಸತಿ ಇಲಾಖೆಯ ವಿವಿಧ ನಿಗಮಗಳಿಂದ ಕ್ಷೇತ್ರದ ಮುಸ್ಲಿಮರಿಗೆ ಯಾವ ರೀತಿಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ಸದನದ ಗಮನ ಸೆಳೆದರು.
ವಸತಿ ಇಲಾಖೆಯ ನಿಗಮಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ವಸತಿ ರಹಿತರಿಗೆ ಮನೆಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ನಿಯಮಗಳನ್ನು ಪಾಲಿಸಿಲ್ಲ.ಅದರಲ್ಲೂ, ಶಿಡ್ಲಘಟ್ಟದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ. 75 ಮನೆಗಳು ಬೇರೆಯವರಿಗೆ ಕೊಡಲಾಗಿದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ಸರಕಾರಕೆಕ ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಕೇಂದ್ರ ಪುರಸ್ಕೃತ ಯೋಜನೆಗ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯು ಖಾಯಂ ನಿರೀಕ್ಷಣಾ ಪಟ್ಟಿ ಮೂಲಕ ಕ್ರಮಾಂಕವಾರು ಆಯ್ಕೆ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ 500 ಮನೆಗಳನ್ನು ನೀಡಿದ್ದೇವೆ. 75 ಮನೆಗಳು ಶಾಸಕರ ವಿವೇಚನೆ ಇಂದ ನೀಡುವುದಾಗಿದೆ. ಈ ಸಂಬಂಧಿಸಿದಂತೆ ಚರ್ಚಿಸಲು ನಾಳೆ ಸಭೆ ಕರೆಯಲಾಗಿದೆ. ಸಭೆಗೆ ಶಾಸಕರೂ ಬರಬಹುದು. ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.