×
Ad

ಕೋಟಿಗಟ್ಟಲೆ ಹಣ ಲಂಚ ಕೇಳುವ ಧೈರ್ಯ ಅಧಿಕಾರಿಗಳಿಗೆ ಬಂತು ಎಂದರೆ ಅದರ ಹಿಂದಿರುವ ರಾಜಕೀಯ ಶ್ರೀರಕ್ಷೆ ಯಾರದ್ದು? : ಬಿ.ವೈ.ವಿಜಯೇಂದ್ರ

"ಸಚಿವ ತಿಮ್ಮಾಪುರ ರಾಜೀನಾಮೆ ನೀಡಿ ತನಿಖೆ ಎದುರಿಸಲಿ"

Update: 2026-01-18 23:40 IST

ಬೆಂಗಳೂರು : ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಲೋಕಾಯುಕ್ತರ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ, ಇದು ಖಂಡಿತವಾಗಿ ವೈಯಕ್ತಿಕ ಭ್ರಷ್ಟಾಚಾರವಲ್ಲ, ಇದು ವ್ಯವಸ್ಥಿತ ‘ಕಲೆಕ್ಷನ್ ಮಾಫಿಯಾ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಪೂರ್ಣ-ಇದೇ ಕಾಂಗ್ರೆಸ್ ಸಾಧನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ದಿನದಿಂದ ದಿನಕ್ಕೆ ತನ್ನದೇ ದಾಖಲೆ ಮುರಿಯುತ್ತಾ ಸಾಗುತ್ತಿದೆ. ಇವರ ಭ್ರಷ್ಟಾಚಾರ, ಲೂಟಿ, ಹಗಲು ದರೋಡೆ ಗ್ಯಾರಂಟಿಗಳಿಂದಾಗಿ ರಾಜ್ಯದ ಜನತೆ ತತ್ತರಿಸಿದ್ದಾರೆ. ಇವರ ಭ್ರಷ್ಟಾಚಾರದ ಸರಣಿಯ ಮುಂದಿನ ಕಂತು ಎನ್ನುವಂತಿದೆ ಎಂದು ಟೀಕಿಸಿದ್ದಾರೆ.

‘ಸಿಎಲ್-7 ಲೈಸೆನ್ಸ್‍ಗೆ 80ಲಕ್ಷ ರೂ., ಮೈಕ್ರೋ ಬ್ರಿವರಿ ಲೈಸೆನ್ಸ್‍ಗೆ 1.5 ಕೋಟಿ ರೂ.ಲಂಚ ಬೇಕು ಎಂದು ಅಧಿಕಾರಿಗಳು ಸ್ಪಷ್ಟವಾಗಿ ಕೇಳಿದ್ದರು ಎನ್ನಲಾಗಿದ್ದು, ಇದೊಂದು ‘ಪ್ಯಾಕೇಜ್ ಡೀಲ್’ ಎಂದು ಈ ಸರಕಾರದ ಅಧಿಕಾರಿಗಳೇ ಹೇಳಿರುವುದಾಗಿ ವರದಿಯಾಗಿದೆ. ‘ಇವರಿಗೆ ಇಷ್ಟು, ನಮಗೆ ಇಷ್ಟು’ ಎಂದು ಪಾಲು ಹಂಚಿಕೆಯ ಬಗ್ಗೆ ಅಧಿಕಾರಿಗಳು ಮಾತನಾಡಿದ್ದಾರೆ. ಕೋಟಿಗಟ್ಟಲೆ ಹಣ ಲಂಚ ಕೇಳುವ ಧೈರ್ಯ ಅಧಿಕಾರಿಗಳಿಗೆ ಬಂತು ಎಂದರೆ ಅದರ ಹಿಂದಿರುವ ರಾಜಕೀಯ ಶ್ರೀರಕ್ಷೆ ಯಾರದ್ದು?’ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಈ ಪ್ರಕರಣದ ಹಿಂದೆ ಕಾಂಗ್ರೆಸ್ ಅಬಕಾರಿ ಸಚಿವರ ಹೆಸರು ಬಹಿರಂಗವಾಗಿದ್ದು ಮೊದಲು ಅವರು ರಾಜೀನಾಮೆ ನೀಡಬೇಕು. ಸರಕಾರದ ಭ್ರಷ್ಟಾಚಾರದ ಕರಾಳ ಮುಖ ಈ ಬಾರಿ ಲೋಕಾಯುಕ್ತದಿಂದಲೇ ಬಹಿರಂಗವಾಗಿದ್ದರೂ, ಸಿಎಂ ಸುಮ್ಮನಿದ್ದಾರೆ ಅಂದರೆ, ಇದಕ್ಕಿಂತಲೂ ಈ ಸರಕಾರದ ನೈತಿಕ ಪತನಕ್ಕೆ ಬೇರೆ ಸಾಕ್ಷಿ ಬೇಕೆ?. ಜನರ ಕಣ್ಣಿಗೆ ಮಣ್ಣೆರಚಿ, ಒಳಗಿನಿಂದ ಬೊಕ್ಕಸವನ್ನು ಹೇಗೆ ಲೂಟಿ ಮಾಡುತ್ತಿದೆ ಎನ್ನುವುದು ಸಾಬೀತಾಗಿದೆ. ಸಚಿವ ತಿಮ್ಮಾಪುರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಸರಕಾರದ ಭ್ರಷ್ಟ ಮುಖ ಬಟಾಬಯಲಾದ ಮೇಲೂ ಈಗ ಮತ್ತಿನ್ಯಾವ ನೆಪ ಹೇಳಿ ಕಾಲ ತಳ್ಳುವಿರಿ? ಅತ್ತ ರೈತರು ಸರಕಾರದ ನೆರವಿಗಾಗಿ ಅಂಗಲಾಚುತ್ತಿದ್ದಾರೆ, ಜನರು ಅಭಿವೃದ್ಧಿ ಕಾಣದೆ ಬಸವಳಿದಿದ್ದಾರೆ. ನಿಮ್ಮ ಸರಕಾರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜನರನ್ನು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇನ್ನ್ಯಾವ ಸಾಕ್ಷಿಗಾಗಿ ಕಾಯುತ್ತಿದ್ದೀರಿ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ನಿಮ್ಮ ಪ್ರತಿಯೊಂದು ಇಲಾಖೆಯೂ ನಿಮ್ಮ ಪಕ್ಷಕ್ಕೆ ಎಟಿಎಂ ಆಗಿ ಬದಲಾಗಿದೆ. ಈ ಪ್ರಕರಣವನ್ನು ಕೇವಲ ಅಧಿಕಾರಿಗಳಿಗೆ ಸೀಮಿತಗೊಳಿಸದೆ, ಇದರ ಬೇರು ಎಲ್ಲಿಯವರೆಗೆ ಹಬ್ಬಿದೆ ಎಂಬುದನ್ನು ತನಿಖೆ ಮಾಡಲೇಬೇಕು. ರಾಜ್ಯದ ಸ್ವಾಭಿಮಾನಿ ಜನತೆಗೆ ಉತ್ತರ ನೀಡುವ ಕಾಲ ಬಂದಿದೆ. ಭ್ರಷ್ಟ ಸಚಿವರನ್ನು ರಕ್ಷಿಸುವುದನ್ನು ಬಿಟ್ಟು, ನೈಜ ತನಿಖೆಗೆ ಆದೇಶಿಸಿ. ಇಲ್ಲವಾದರೆ ಜನರ ಆಕ್ರೋಶಕ್ಕೆ ಉತ್ತರಿಸಲು ಸಿದ್ದರಾಗಿ’ ಎಂದು ವಿಜಯೇಂದ್ರ ಸವಾಲು ಹಾಕಿದ್ದಾರೆ.

‘ಅಬಕಾರಿ ಅಧಿಕಾರಿಯೊಬ್ಬರು 25 ಲಕ್ಷ ರೂ.ಲಂಚ ಸ್ವೀಕಾರದ ವೇಳೆಯಲ್ಲೇ ಸಿಕ್ಕಿಬಿದ್ದಿರುವುದು ಕಾಂಗ್ರೆಸ್ ಸರಕಾರದ ಭ್ರಷ್ಟ ಆಡಳಿತಕ್ಕೆ ಸಿಕ್ಕ ಜ್ವಲಂತ ಸಾಕ್ಷಿಯಾಗಿದೆ. ಅಧಿಕಾರಿಯೊಬ್ಬರು ಇಷ್ಟೊಂದು ಪ್ರಮಾಣದ ಲಂಚ ಪಡೆಯಲು ಸಾಧ್ಯವೇ ಇಲ್ಲ, ಇದರಲ್ಲಿ ಅಬಕಾರಿ ಸಚಿವರ ಪಾಲೂ ಇದೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ’ ಎಂದು ಬಿಜೆಪಿ ಟೀಕಿಸಿದೆ.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News