×
Ad

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ? : ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ವಿರುದ್ಧ ಅಭಿಯೋಜನಾ ಪ್ರಸ್ತಾವ ಕೈಬಿಟ್ಟ ಸಚಿವ ಸಂಪುಟ

Update: 2025-05-23 00:57 IST

ಬೆಂಗಳೂರು : 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಹಿಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಹಾಗೂ ಒಂಭತ್ತು ಮಂದಿ ಸದಸ್ಯರನ್ನು ಅಭಿಯೋಜನೆಗೊಳಪಡಿಸುವ ಪ್ರಸ್ತಾವವನ್ನು ರಾಜ್ಯ ಸಚಿವ ಸಂಪುಟ ಕೈ ಬಿಡಲು ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಷ್ಟ್ರಪತಿಯವರ ಮಂಜೂರಾತಿ ಪಡೆಯಲು ಸಿಐಡಿ ಮಾಡಿದ ಶಿಫಾರಸನ್ನು ಒಪ್ಪದೇ ಅವರ ವಿರುದ್ಧದ ಅಭಿಯೋಜನಾ ಪ್ರಸ್ತಾವವನ್ನು ಕೈ ಬಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕಾನೂನು ಮಾಡಲಾಗಿತ್ತು. 48 ಜನ ಸಹಾಯಕ ಆಯುಕ್ತರು ಸೇರಿದಂತೆ ಇತರ ಪ್ರೊಬೇಷನರಿ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕ ಆಯ್ಕೆ ಕ್ರಮಬದ್ಧವಾಗಿದ್ದರಿಂದ ಅಭಿಯೋಜನಾ ಪ್ರಸ್ತಾವವನ್ನು ಕೈ ಬಿಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿಗಳಾದ ಭರತ್ ಲಾಲ್ ಮೀನಾ ಮತ್ತು ಪಿ.ಬಿ.ರಾಮಮೂರ್ತಿ, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಸುರೇಶ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಝಾಮುದ್ದೀನ್ ವಿರುದ್ಧ ಲೋಕಾಯುಕ್ತರು ಇಲಾಖಾ ವಿಚಾರಣೆಗೆ ವಹಿಸಲು ಮಾಡಿರುವ ಶಿಫಾರಸನ್ನು ಕೈ ಬಿಡಲು ನಿರ್ಧರಿಸಲಾಗಿದೆ. ಹಾಗೆಯೇ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ವಿರುದ್ಧ ಲೋಕಾಯುಕ್ತ ಮಾಡಿರುವ ಶಿಫಾರಸನ್ನು ತಿರಸ್ಕರಿಸಿ, ದೋಷಮುಕ್ತಗೊಳಿಸಿ ಪ್ರಕರಣವನ್ನು ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಗ್ರಾಮ ಪಂಚಾಯತ್, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿನ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಶುಲ್ಕ ಬಾಕಿಯ 5257.70 ಕೋಟಿ ರೂ. ಮೊತ್ತವನ್ನು ಖಾತೆಯ ಮೂಲಕ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಪಾವತಿಸುವ ಕುರಿತು 2024ರ ಮಾ.30 ಮತ್ತು ಜೂ.14ರಂದು ಹೊರಡಿಸಿರುವ ಸರಕಾರಿ ಆದೇಶಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಮೈಸೂರು ಹಾಗೂ ದಾವಣಗೆರೆಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಇನ್ ಹೌಸ್ ಮಾದರಿಯಲ್ಲಿ ಎರಡು ಎಂಆರ್‌ಐ ಸ್ಕ್ಯಾನ್ ಯಂತ್ರಗಳನ್ನು 30 ಕೋಟಿ ರೂ.ಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಚಿತ ರೋಗ ಪತ್ತೆ ಸೇವೆಗಳ ಕಾರ್ಯಕ್ರಮದಡಿಯಲ್ಲಿ ಇಸಿಆರ್‌ಪಿ-11 ಅನುದಾನದಲ್ಲಿ ಇನ್ ಹೌಸ್ ಮಾದರಿಯಲ್ಲಿ ಅಳವಡಿಸಿ ಸೇವೆಯನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರ (ತಿದ್ದುಪಡಿ) ನಿಯಮಗಳು, 2025ನ್ನು ಹೊರಡಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಈಗಿರುವ ಮಧ್ಯಸ್ಥಿಕೆದಾರರ ಶುಲ್ಕ ಕನಿಷ್ಠ 50 ಸಾವಿರ ರೂ.ಗಳಿಂದ ವಿವಿಧ ಸ್ಲ್ಯಾಬ್‌ಗಳಿಗೆ 15 ಲಕ್ಷ ರೂ.ವರೆಗೆ ಮತ್ತು 25 ಸಾವಿರ ರೂ.ಗಳಿಂದ 50 ಸಾವಿರ ರೂ.ವರೆಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಗ್ರಾಮದ ಸ.ನಂ.475ರಲ್ಲಿ 25 ಗುಂಟೆ ಜಮೀನನ್ನು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ‘ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು’ ಇವರಿಗೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ವೈದ್ಯರ ಗ್ರಾಮೀಣ ಸೇವಾ ನಿಯಮ ಸಡಿಲು: ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ(ತಿದ್ದುಪಡಿ) ವಿಧೇಯಕ, 2025 ಅನ್ನು ಅಧ್ಯಾದೇಶದ ಮೂಲಕ ಹೊರಡಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ಸರಕಾರಿ ಕೋಟಾದಡಿಯಲ್ಲಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯ ಮೇಲೆ ಭರ್ತಿ ಮಾಡಿ, ಉಳಿದ ಖಾಲಿ ಹುದ್ದೆಗಳಿಗೆ ಸಂಸ್ಥೆಯ ಕೋಟಾದಡಿಯಲ್ಲಿ ಓದಿದ ವಿದ್ಯಾರ್ಥಿಗಳನ್ನು ಭರ್ತಿ ಮಾಡಿ, ಉಳಿದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲು ಅವಕಾಶ ಕಲ್ಪಿಸಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಹುದ್ದೆಗಳಿಗಿಂತ ಹೆಚ್ಚಿನ ಎಂಬಿಬಿಎಸ್ ಪದವೀಧರರು ಇರುವುದರಿಂದ ಅಂತಹವರಿಗೆ ವಿನಾಯಿತಿ ನೀಡಲು ಈ ವಿಧೇಯಕ ತರಲಾಗುತ್ತಿದೆ. ಸದ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಇಲ್ಲದೇ ಇರುವುದರಿಂದ ಅಧ್ಯಾದೇಶದ ಮೂಲಕ ಈ ವಿಧೇಯಕ ಜಾರಿಗೆ ತರಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಇತರ ನಿರ್ಣಯಗಳು: ಕರ್ನಾಟಕ ಗೃಹ ಮಂಡಳಿಯು ಬೆಂಗಳೂರು ನಗರ, ಕೆಂಗೇರಿ ಬಂಡೇಮಠ ಬಡಾವಣೆಯಲ್ಲಿ ಬಹುಮಹಡಿ ವಸತಿ ಸಮುಚ್ಛಯಗಳನ್ನು ನಿರ್ಮಿಸುವ 180 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ. ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆಯಿಂದ(ಹೆಚ್ಚುವರಿ ವಿಸ್ತರಣೆ ಮೂಲಕ) ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ 140 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ ಹಾಗೂ ಶಾನಗಾನಹಳ್ಳಿ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು 18.50 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಾಜಪರಮೇಶ್ವರಿ ನಾಲೆ ಮತ್ತು ಹಾರೋಹಳ್ಳಿ ಮೇಲ್ದಂಡೆ ನಾಲೆಯಡಿಯಲ್ಲಿ ಬರುವ ಉದ್ದೀನಾಲೆ ಮತ್ತು ಮೈನರ್‌ಗಳಿಗೆ ಆರ್‌ಸಿಸಿ ಟ್ರಫ್ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ 45 ಕೋಟಿ ರೂ., ಎರಿಜಾ ಅಣೆಕಟ್ಟು ನಾಲೆಯ ಹಾರೋಹಳ್ಳಿ ಪಿಕಲ್ ನಾಲೆ ಹಾಗೂ ರಾಜಪರಮೇಶ್ವರಿ ನಾಲೆಯ ಬಂಡಿ ಬಚ್ಚಲು ಶಾಖಾ ನಾಲೆಯ ಆಧುನೀಕರಣ ಕಾಮಗಾರಿಗೆ 45 ಕೋಟಿ ರೂ., ಬನ್ನೂರು ಪಟ್ಟಣ ಬಳಿ ಕಾವೇರಿ ನದಿಯಿಂದ ನೀರೆತ್ತಿ ಹಾರೋಹಳ್ಳಿ ಮೇಲ್ಮಟ್ಟದ ನಾಲೆ ಹಾಗೂ ಕೆಳಮಟ್ಟದ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಕಾಮಗಾರಿಯನ್ನು 49.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಮೈಸೂರು ತಾಲೂಕಿನ ಚಿಕ್ಕಂಕನಹಳ್ಳಿ ಕೆರೆಯ ಮೆಗ್ಗಾಲುವೆ ಮತ್ತು ಕಿಗ್ಗಾಲುವೆಗಳ ಆಧುನೀಕರಣ ಕಾಮಗಾರಿಯನ್ನು 34.65 ಕೋಟಿ ರೂ. ಹಾಗೂ ರಾಮನಗರ ಜಿಲ್ಲೆಯ ಕನಕಪುರ ನಗರ ವ್ಯಾಪ್ತಿಯಲ್ಲಿನ ಅರ್ಕಾವತಿ ನದಿ ದಂಡೆ ಅಭಿವೃದ್ಧಿ ಯೋಜನೆಯಡಿ ಅರ್ಕಾವತಿ ಜಲಾಶಯ ಯೋಜನೆಯ ಕಾಮಗಾರಿಯನ್ನು 120 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಚರ್ಚೆ ಅಪೂರ್ಣ

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆ ಅಪೂರ್ಣವಾಯಿತು. ಮುಖ್ಯಮಂತ್ರಿ ಸೂಚಿಸಿರುವಂತೆ ಅನೇಕ ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಸಲಿದ್ದಾರೆ. ಇನ್ನೂ ನಾಲ್ಕೈದು ಸಚಿವರ ಅಭಿಪ್ರಾಯ ಬರಬೇಕಿದೆ. ಮುಂದಿನ ಅಥವಾ ಆನಂತರದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News