×
Ad

ಸೆ.28ರಂದು ‘ಮಾಸದ ಮಾಧುರ್ಯ’ ಕಾರ್ಯಕ್ರಮದ 100ರ ಸಂಭ್ರಮ: ಡಾ.ಸಿ.ಎನ್.ಅಶ್ವತ್ಥನಾರಾಯಣ್

Update: 2025-09-16 15:19 IST

ಬೆಂಗಳೂರು: ನಗರದ ತೆಲುಗು ವಿಜ್ಞಾನ ಸಮಿತಿಯ ಸಭಾಂಗಣದಲ್ಲಿ ಸೆ. 28ರಂದು ಜಗನ್ನಾಥ ಬಳಗದ ‘ಮಾಸದ ಮಾಧುರ್ಯ’ ಕಾರ್ಯಕ್ರಮದ 100ರ ಸಂಭ್ರಮ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಚೇರಿಯಿಂದ ಬೆಳಿಗ್ಗೆ 9.30ಕ್ಕೆ ಶೋಭಾಯಾತ್ರೆ ನಡೆಯಲಿದೆ. ರಾಜ್ಯದ ನಾನಾ ತಂಡಗಳು ಪಾಲ್ಗೊಳ್ಳಲಿವೆ ಎಂದು ವಿವರಿಸಿದರು. 10.30ಕ್ಕೆ ಉದ್ಘಾಟನೆ ನಡೆಯಲಿದ್ದು, 100 ಕಾರ್ಯಕ್ರಮಗಳ ಕುರಿತ ಪ್ರದರ್ಶಿನಿಯೂ ಇರಲಿದೆ ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಕೇಂದ್ರದ ಸಚಿವರು, ಗಣ್ಯರು ಪಾಲ್ಗೊಳ್ಳುತ್ತಾರೆ. ವಿಚಾರಗೋಷ್ಠಿಗಳೂ ಇರುತ್ತವೆ. ಮಧ್ಯಾಹ್ನ 12ರಿಂದ 12.35ರ ನಡುವೆ ಬಿಜೆಪಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಪ್ರತಿಬಿಂಬಿಸುವ ನಾಟಕ ಪ್ರದರ್ಶನ ಇರಲಿದೆ ಎಂದು ವಿವರ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕಲೆಯ ಪಾತ್ರ ಕುರಿತ ಚರ್ಚಾಗೋಷ್ಠಿ ನೆರವೇರಲಿದೆ ಎಂದು ತಿಳಿಸಿದರು.

ಈ ಚರ್ಚಾಗೋಷ್ಠಿಯಲ್ಲಿ ಚಿಂತಕ ಜಿ.ಬಿ.ಹರೀಶ್, ಡಾ.ಎಸ್.ಆರ್.ಲೀಲಾ, ಎಸ್.ಎನ್. ಸೇತೂರಾಂ, ಸುಚೇಂದ್ರ ಪ್ರಸಾದ್ ಅವರು ಭಾಗವಹಿಸುತ್ತಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಕಲೆ, ಕಲಾವಿದ ಮತ್ತು ರಾಜಕೀಯ ಕುರಿತ ವಿಚಾರಗೋಷ್ಠಿ ಇರಲಿದೆ. ಇದರಲ್ಲಿ ಪ್ರಮುಖರಾದ ಡಾ.ಬಿ.ವಿ.ರಾಜಾರಾಂ, ಟಿ.ಎಸ್.ನಾಗಾಭರಣ, ಮಾಳವಿಕ ಅವಿನಾಶ್, ಅಭಿಷೇಕ್ ಅಯ್ಯಂಗಾರ್ ಅವರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

ನಂತರ ಸ್ಟಾಂಡಪ್ ಕಾಮೆಡಿಯನ್ ರಾಘವೇಂದ್ರ ಆಚಾರ್ ಅವರ ಕಾರ್ಯಕ್ರಮ ಇದೆ. ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ ನೆರವೇರಿಸಲಾಗುತ್ತದೆ ಎಂದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬಿಜೆಪಿ ನಿಕಟಪೂರ್ವ ರಾಜ್ಯ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೋರ್ ಕಮಿಟಿ ಸದಸ್ಯ ನಿರ್ಮಲ್‍ಕುಮಾರ್ ಸುರಾಣ, ಮಾಸದ ಮಾಧುರ್ಯ ಕಾರ್ಯಕ್ರಮದ ರಾಜ್ಯ ಸಂಚಾಲಕ ದತ್ತಗುರು ಹೆಗ್ಡೆ, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ರಾಜ್ಯ ಸಂಚಾಲಕಿ ರೂಪ ಅಯ್ಯರ್ ಅವರು ಭಾಗವಹಿಸುತ್ತಾರೆ ಎಂದರು.

‘ಮಾಸದ ಮಾಧುರ್ಯ’ ಕಾರ್ಯಕ್ರಮದ 100ರ ಸಂಭ್ರಮಕ್ಕೆ ಸಾಕಷ್ಟು ತಯಾರಿ ಮಾಡಲಾಗಿದೆ. ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕವಿ ಹೃದಯದವರು ಎಂದು ನೆನಪಿಸಿದರು. ಬಿಜೆಪಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ಆದ್ಯತೆ ನೀಡಲು ಪಣ ತೊಟ್ಟು ಕೆಲಸ ಮಾಡುತ್ತಿದೆ. 2014ರ ನ.1ರಂದು ‘ಮಾಸದ ಮಾಧುರ್ಯ’ ವನ್ನು ಪ್ರಾರಂಭಿಸಲಾಗಿದೆ. ಮಾಸ್ಟರ್ ಹಿರಣ್ಯಯ್ಯ ಅವರು ಆಗ ಉದ್ಘಾಟನೆ ನೆರವೇರಿಸಿದ್ದರು. ಈಗ 100ರ ಸಂಭ್ರಮಕ್ಕೆ ಸಜ್ಜಾಗಿದ್ದೇವೆ. ರಾಜ್ಯದ ಪ್ರಸಿದ್ಧ ತಂಡಗಳು ಇಲ್ಲಿ ಕಾರ್ಯಕ್ರಮ ನೀಡಿವೆ ಎಂದು ವಿವರಿಸಿದರು.

ಕಲೆ, ನೃತ್ಯ, ಸಾಹಿತ್ಯ ಮೊದಲಾದ ಕ್ಷೇತ್ರಕ್ಕೆ ಒತ್ತು ಕೊಡಲಾಗಿದೆ ಎಂದರು. ‘ಮಾಸದ ಮಾಧುರ್ಯ’ 100ನೇ ಸಂಭ್ರಮದ ಲೋಗೋ ಅನಾವರಣ ಮಾಡಿದರು. ‘ಮಾಸದ ಮಾಧುರ್ಯ’ ನಡೆದು ಬಂದ ದಾರಿ ಕುರಿತ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮಕ್ಕೆ ಗಣ್ಯರು ಕಳುಹಿಸಿದ ಶುಭ ಸಂದೇಶಗಳ ಮಾಹಿತಿಯ ವಿಡಿಯೋ ಪ್ರದರ್ಶಿಸಲಾಯಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ಕನ್ನಡ ಚಲನಚಿತ್ರ ನಟಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯೆ ಶ್ರೀಮತಿ ತಾರಾ ಅನುರಾಧ, ಕನ್ನಡ ಚಲನಚಿತ್ರ ನಟಿ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶ್ರುತಿ, ಖ್ಯಾತ ಚಲನಚಿತ್ರ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್, ಮಾಸದ ಮಾಧುರ್ಯ ಕಾರ್ಯಕ್ರಮದ ರಾಜ್ಯ ಸಂಚಾಲಕ ದತ್ತಗುರು ಹೆಗ್ಡೆ ಮತ್ತು ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ರಾಜ್ಯ ಸಂಚಾಲಕಿ ರೂಪ ಅಯ್ಯರ್ ಅವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News