×
Ad

ಸಿಇಟಿ: ವಿಶೇಷ ಕ್ಯಾಟಗರಿ ಪ್ರಮಾಣಪತ್ರ ಖುದ್ದು ಸಲ್ಲಿಕೆ ಮೇ 5ರಿಂದ ಆರಂಭ

Update: 2025-04-30 21:23 IST

ಬೆಂಗಳೂರು: ಸಿಇಟಿ-25ರ ಪರೀಕ್ಷೆಗೆ ಅರ್ಜಿ ಸಲ್ಲಿಕೆ ವೇಳೆ ವಿಶೇಷ ಕ್ಯಾಟಗರಿಗಳ ಅಡಿ ಸೀಟು ಹಂಚಿಕೆಗೆ ಕ್ಲೇಮು ಮಾಡಿರುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಮೇ 5 ರಿಂದ ಮೇ 14ರೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಲ್ಲೇಶ್ವರಂ ಕಚೇರಿಗೆ ಖುದ್ದು ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಡಿಫೆನ್ಸ್, ಎಕ್ಸ್-ಡಿಫೆನ್ಸ್, ಸಿಎಪಿಎಫ್, ಸಿಆರ್‍ಪಿಎಫ್, ಸಿಐಎಸ್‍ಎಫ್, ಬಿಎಎಫ್, ಐಟಿಬಿಪಿ, ಎಕ್ಸ್-ಸಿ ಎ ಪಿ ಎಫ್, ಸ್ಕೌಟ್ಸ್ ಮತ್ತು ಗೈಡ್ಸ್, ಆಂಗ್ಲೋ ಇಂಡಿಯನ್ ಹಾಗೂ ಎನ್‍ಸಿಸಿ ಕೋಟಾದಡಿ ಸೀಟು ಕ್ಲೇಮು ಮಾಡಿರುವ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ.

ಸಿಎಪಿಎಫ್/ಸಿಆರ್‍ಪಿಎಫ್/ಸಿಐಎಸ್‍ಎಫ್/ಬಿಎಸ್‍ಎಫ್/ಐಟಿಬಿಪಿ ಕ್ಲೇಮು ಮಾಡಿರುವವರು ಮೇ 5ರಂದು ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಎಕ್ಸ್- ಡಿಫೆನ್ಸ್/ಎಕ್ಸ್-ಸಿಎಪಿಎಫ್ ಅಭ್ಯರ್ಥಿಗಳು ಮೇ 6 ಹಾಗೂ 7ರಂದು, ಡಿಫೆನ್ಸ್ ಕ್ಲೇಮು ಮಾಡಿರುವವರು ಮೇ 8 ಹಾಗೂ 9ರಂದು, ಸ್ಕೌಟ್ಸ್ & ಗೈಡ್ಸ್/ಆಂಗ್ಲೋ ಇಂಡಿಯನ್ ಕೋಟಾ ಕೋರಿರುವವರು ಮೇ 12ರಂದು ಮತ್ತು ಎನ್‍ಸಿಸಿ ಕ್ಲೇಮು ಮಾಡಿರುವವರು ಮೇ 13 ಹಾಗೂ 14ರಂದು ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

ಈ ದಿನಗಳಂದು ಅಭ್ಯರ್ಥಿಗಳು ಬೆಳಿಗ್ಗೆ 10.30 ರಿಂದ ಸಂಜೆ 5:30ರ ಒಳಗೆ ಕಚೇರಿಯ ಅವಧಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಖುದ್ದು ಹಾಜರಾಗಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಕ್ರೀಡಾ ಕೋಟಾದಡಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಬಗ್ಗೆ ನಂತರದಲ್ಲಿ ದಿನಾಂಕ ಪ್ರಕಟಿಸಲಾಗುವುದು.

ಕ್ಲಾಸ್ ಬಿ ಇಂದ ಓ: ಮೂಲದಾಖಲೆ ಪರಿಶೀಲನೆ: ಸಿಇಟಿ- 25ರ ಅರ್ಜಿ ನಮೂನೆಯಲ್ಲಿ ಅರ್ಹತಾ ಕಂಡಿಕೆ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಮ್, ಎನ್ ಮತ್ತು ಓ ಗಳನ್ನು ಕ್ಷೇಮ್ ಮಾಡಿರುವ ಅಭ್ಯರ್ಥಿಗಳಿಗೆ ಮೇ 5ರಿಂದ ಮೇ 15ರ ವರೆಗೆ ಮೂಲ ದಾಖಲೆಗಳ ಖುದ್ದು ಪರಿಶೀಲನೆಯು ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯಲಿದೆ.

ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗುವ ಮೊದಲು ಅರ್ಹತಾ ಕ್ಲಾಸ್ ಕೋಡ್ ಅಡಿಯಲ್ಲಿ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಬಗ್ಗೆ ಕೆಇಎ ವೆಬ್ ಸೈಟ್ http://kea.kar.nic.in ನಲ್ಲಿ ಹಾಗೂ ಇ-ಬ್ರೋಷರ್ ನಲ್ಲಿ ವಿವರಿಸಲಾಗಿದೆ. ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಖುದ್ದು ಹಾಜರಾಗಬೇಕು. ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಚುರಪಡಿಸಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತಾ ಕಂಡಿಕೆಗನುಸಾರವಾಗಿ ಎಲ್ಲಾ ಅಗತ್ಯ ಮೂಲ ದಾಖಲೆಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ದಾಖಲಾತಿ ಪರಿಶೀಲನೆಗೆ ಬರುವ ಮೊದಲು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್‍ನಲ್ಲಿ ಸ್ಲಾಟ್ ಅನ್ನು ಬುಕ್ ಮಾಡಿಕೊಂಡು ನಿಗದಿಯಾದ ದಿನದಂದೇ ಪರಿಶೀಲನೆಗೆ ಹಾಜರಾಗಬೇಕು.

ಕ್ಲಾಸ್ ‘ಎ’ ಅಭ್ಯರ್ಥಿಗಳು ಕೈಮ್ ಸರ್ಟಿಫಿಕೇಟ್‍ನಲ್ಲಿ ಸೂಚಿಸಿರುವಂತೆ ಅಗತ್ಯವಿದ್ದಲ್ಲಿ ಪರಿಶೀಲನೆಯನ್ನು ಆಯಾ ಕಾಲೇಜಿನಲ್ಲಿ ಮಾಡಿಸಿಕೊಳ್ಳಬೇಕು ಹಾಗೂ 'ವೈ' ಕ್ಲಾಸ್ ಕ್ಲೇಮು ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News