ಲಕ್ಷ್ಮೀ ಹೆಬ್ಬಾಳ್ಕರ್ ಸೆಕ್ಯುರಿಟಿ ಬಿಟ್ಟು ಪ್ರಯಾಣಿಸಿದ್ದೇಕೆ? : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ಇತ್ತೀಚೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಯಾಣ ಮಾಡುತ್ತಿದ್ದ ಕಪ್ಪು ಕಾರು ಅಪಘಾತಕ್ಕೆ ಈಡಾಗಿದೆ. ಆ ಕಾರಿನಲ್ಲಿ ಯಾರ್ಯಾರು ಇದ್ದರು? ನೀವು ಸಚಿವರಾಗಿ ಸರಕಾರಿ ಕಾರಿದ್ದರೂ, ಸೆಕ್ಯುರಿಟಿ, ಎಸ್ಕಾರ್ಟ್ ಬಿಟ್ಟು ಯಾಕೆ ಹೋಗಿದ್ದೀರಿ? ಪ್ರವಾಸ ಯೋಜನೆ (ಟಿಪಿ) ಯಾಕಿಲ್ಲ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆದ ಅಪಘಾತ, ನೋವಿಗೆ ವಿಷಾದ, ಬೇಸರ ವ್ಯಕ್ತಪಡಿಸುತ್ತೇನೆ. ಅವರ ಬೇಗನೆ ಗುಣಮುಖರಾಗಿ ಬರಲಿ ಎಂದರು.
ಹಾಗೆಯೇ ಹೆಬ್ಬಾಳ್ಕರ್ ಅವರು ಸೆಕ್ಯುರಿಟಿ ಬಿಟ್ಟು ಪ್ರಯಾಣಿಸಿದ್ದೇಕೆ? ಘಟನೆ ನಡೆದಿದ್ದು ಹೇಗೆಂದು ಜನರಿಗೆ ತಿಳಿಸಬೇಕು. ಕಾರು ಚಾಲಕ ಈಗ ಎಲ್ಲಿದ್ದಾರೆ. ಅಪಘಾತದಲ್ಲಿ ‘ನಾಯಿ ಅಡ್ಡ ಬಂದದ್ದು, ಹಿಂದಿನಿಂದ ಬೇರೊಂದು ವಾಹನ ಗುದ್ದಿ ಹೋದದ್ದು, ಚಾಲಕ ನಿದ್ದೆಗೆ ಜಾರಿದ್ದ’ ಎಂದೆಲ್ಲಾ ಒಬ್ಬೊಬ್ಬರೂ ಒಂದೊಂದು ಹೇಳಿಕೆ ನೀಡಿದ್ದಾರೆ. ಇವುಗಳಲ್ಲಿ ಯಾವುದು ಸತ್ಯ? ಎಂದು ಛಲವಾದಿ ನಾರಾಯಣಸ್ವಾಮಿ ಕೇಳಿದರು.
ಬೆಳಗಾವಿಗೆ ಕರೆನ್ಸಿ ಲೋಡ್: ‘ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕಾರಿನಲ್ಲಿ ಬೆಳಗಾವಿಗೆ ಕರೆನ್ಸಿ ಲೋಡ್ ತೆಗೆದುಕೊಂಡು ಹೋಗುತ್ತಿದ್ದರೆಂದು ಸ್ಥಳೀಯರು ಹೇಳುತ್ತಾರೆ. ಇದು ಮನೆ ಮಾತಾಗಿದೆ. ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸುತ್ತಿದ್ದರೆನ್ನಲಾಗಿದೆ. ದೂರು ಕೊಡದೆ ಆ ಕಾರನ್ನು ಲಿಫ್ಟ್ ಮಾಡಿ ಒಯ್ದದ್ದು ಯಾಕೆ?. ಕಾರಿನಲ್ಲಿದ್ದ ವಸ್ತುಗಳ ಕುರಿತು ಸರಕಾರ ಉತ್ತರಿಸಬೇಕು’ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.