×
Ad

ಕಪ್ಪುಪಟ್ಟಿಗೆ ಸೇರಿದ ಕಂಪೆನಿಗೆ ಮುದ್ರಣ ಟೆಂಡರ್ : ಛಲವಾದಿ ನಾರಾಯಣಸ್ವಾಮಿ ಆರೋಪ

Update: 2025-05-05 18:37 IST

ಬೆಂಗಳೂರು : ‘ಮುದ್ರಣ ಕೆಲಸವನ್ನೆ ಮಾಡದ ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿಗೆ ಕಾನೂನುಬಾಹಿರವಾಗಿ ಟೆಂಡರ್ ನೀಡಿದ್ದು, ರಾಜ್ಯ ಸರಕಾರ ಲೂಟಿ ಮಾಡುತ್ತಿದೆ’ ಎಂದು ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಕಪಟ್ಟಿ ಮುದ್ರಣಕ್ಕೆ ಬಿಜೆಪಿ ಆಡಳಿತದ ಅವಧಿಯಲ್ಲಿಯೂ ಟೆಂಡರ್ ನೀಡಿದ್ದು, ಒಂದು ಅಂಕಪಟ್ಟಿ ಮುದ್ರಣಕ್ಕೆ 9.45 ರೂ.ಗೆ ಟೆಂಡರ್ ನೀಡಲಾಗಿತ್ತು. ಇದೀಗ ಕಾಂಗ್ರೆಸ್ ಸರಕಾರ ಪ್ಯಾರಾ ಮೆಡಿಕಲ್ ಬೋರ್ಡಿನ ಟೆಂಡರ್ ಕರೆದಿದ್ದು, ಒಂದು ಮಾರ್ಕ್ಸ್‌ ಕಾರ್ಡ್ ಮುದ್ರಿಸಲು 100 ರೂ. ಕೋರಲಾಗಿತ್ತು. ಮಾತುಕತೆ ಬಳಿಕ 91ರೂ.ಗೆ ಇಳಿಸಲಾಗಿದೆ ಎಂದು ಉಲ್ಲೇಖಿಸಿದರು.

ಈ ವಿಚಾರ ಬಹಿರಂಗ ಆದ ಬಳಿಕ ಒಂದು ಅಂಕಪಟ್ಟಿ ಮುದ್ರಿಸಲು 44ರೂ., ಡಿಪ್ಲೊಮಾ ಸರ್ಟಿಫಿಕೇಟಿಗೆ 47ರೂ. ಎಂದು ಬದಲಿಸಿದ್ದರು. ಇಂಟರ್ನ್‍ಶಿಪ್ ಸರ್ಟಿಫಿಕೇಟ್‍ಗೆ 44ರೂ.ನಿಗದಿ ಮಾಡಿ ಕಾರ್ಯಾದೇಶ ನೀಡಿದ್ದಾರೆ. 2024ರ ನವೆಂಬರ್ 29ರಂದು ಈ ವರ್ಕ್ ಆರ್ಡರ್ ಕೊಡಲಾಗಿದೆ. ಸಂಜಯನಗರದ ಊರ್ದವ್ ಮೆನೇಜ್‍ಮೆಂಟ್ ಪ್ರೈವೇಟ್ ಲಿ.ಗೆ ವರ್ಕ್ ಆರ್ಡರ್ ಕೊಡಲಾಗಿದೆ. ಈ ಬಗ್ಗೆ ನನಗೆ ಗೊತ್ತಾಗಿ ಜನವರಿ 8ರಂದು ನಾನು ಸರಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಗಮನ ಸೆಳೆದಿದ್ದೆ. ಇದುವರೆಗೂ ಉತ್ತರ ಕೊಟ್ಟಿಲ್ಲ. ಇದರ ಹಣಕಾಸಿನ ಬಿಡ್ 2024ರ ಡಿಸೆಂಬರ್ 4ರಂದು ಅನುಮೋದನೆ ಪಡೆದಿದೆ. ಈ ಮೇಲ್ಕಂಡ ಕಂಪೆನಿ ಸಚಿವ ಡಾ.ಶರಣಪ್ರಕಾಶ್ ಪಾಟೀಲರ ಹತ್ತಿರದ ಸಂಬಂಧಿ ಒಡೆತನದ್ದು ಎಂದು ಅವರು ಆರೋಪಿಸಿದರು.

ಮುದ್ರಣ ಕೆಲಸವನ್ನೇ ಮಾಡದೆ ಸಚಿವರಿಗೆ ಬೇಕಾದವರಿಗೆ ಕಪ್ಪುಪಟ್ಟಿಗೆ ಸೇರಿದ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಎಷ್ಟು ಸಂಖ್ಯೆಯಲ್ಲಿ ಸರ್ಟಿಫಿಕೇಟ್‌ ಮುದ್ರಣ ಮಾಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈ ಬಗ್ಗೆ ಸರಕಾರ ತಕ್ಷಣವೇ ಉತ್ತರವನ್ನು ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News