×
Ad

ಟಿವಿಕೆ ಸರಕಾರ ರಚನೆ ಹಕ್ಕು ತಡೆಯುವ ರಾಜ್ಯಪಾಲರ ನಡೆ ಸರಿಯಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

"ಬೆಂಗಳೂರು ಉತ್ತರ ಪಾಲಿಕೆ ಕಚೇರಿ; ಸ್ಥಳ ಪರಿಶೀಲನೆ ನಂತರ ತೀರ್ಮಾನ"

Update: 2026-05-07 19:59 IST

ಬೆಂಗಳೂರು, ಮೇ 7: "ವಿಜಯ್ ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆಯಲು ತಮಿಳುನಾಡಿನ ರಾಜ್ಯಪಾಲರಿಗೆ ಯಾವುದೇ ರೀತಿಯ ಅಧಿಕಾರವಿಲ್ಲ. ರಾಜ್ಯಪಾಲರ ನಡೆ ಸರಿಯಲ್ಲ" ಎಂದು ಡಿಸಿಎಂ ಡಿ.ಕೆ‌.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಟಿವಿಕೆ ಪಕ್ಷಕ್ಕೆ ತಮಿಳುನಾಡು ರಾಜ್ಯಪಾಲರು ಬಹುಮತ ಸಾಬೀತಿಗೆ ಅವಕಾಶ ನೀಡದೇ ಇರುವ ಬಗ್ಗೆ ಕೇಳಿದಾಗ, "ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳಿಗೆ ಸರ್ಕಾರ ರಚಿಸಲು ಈ ಹಿಂದೆಯೂ ಅನುಮತಿ ನೀಡಲಾಗಿತ್ತು.‌ ರಾಷ್ಟ್ರಪತಿಗಳಾಗಿದ್ದ ನಾರಾಯಣನ್, ಅಬ್ದುಲ್ ಕಲಾಂ ಅವರೂ ಈ ರೀತಿ ಮಾಡಿದ್ದರು. ವಾಜಪೇಯಿ ಅವರಿಗೂ ಸಹ ಇದೇ ರೀತಿ ಸರ್ಕಾರ ರಚಿಸಲು ಅನುಮತಿ ನೀಡಿ ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು" ಎಂದರು.

"ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ಒಂದು ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು‌. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಒಂದೊಮ್ಮೆ ಬಹುಮತ ಸಾಬೀತು ಆಗದೇ ಹೋದರೆ ಮುಂದಿನ ಆಯ್ಕೆ ನೋಡಬಹುದು" ಎಂದರು.

ಹೊಸ ಪಾಲಿಕೆ ಕಚೇರಿ; ಸ್ಥಳ ಪರಿಶೀಲನೆ ನಂತರ ತೀರ್ಮಾನ

ಬೆಂಗಳೂರು ಉತ್ತರ ಪಾಲಿಕೆಯ ಹೊಸ ಕಚೇರಿ ನಿರ್ಮಾಣ ಮಾಡಬೇಕು ಎಂದು ಮೂರು- ನಾಲ್ಕು ಸ್ಥಳಗಳ ಪ್ರಸ್ತಾವನೆಯಿದೆ. ಸ್ಥಳ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕಿದೆ. ಇದರ ಬಗ್ಗೆ ಮಂತ್ರಿಗಳು, ಶಾಸಕರು ತಮ್ಮದೇ ಆದ ಅಭಿಪ್ರಾಯ ನೀಡಿದ್ದಾರೆ. ಸ್ಥಳ ಪರಿಶೀಲನೆ ನಂತರ ತೀರ್ಮಾನ ಮಾಡಲಾಗುವುದು.

ಜಿಕೆವಿಕೆಯಲ್ಲಿ ನಿರ್ಮಾಣ ಮಾಡಲಾಗುವುದೇ ಎಂದಾಗ, "ಇಲ್ಲ, ಸದ್ಯಕ್ಕೆ ಆ ಆಲೋಚನೆ ಇಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ" ಎಂದು ಉತ್ತರಿಸಿದರು.

ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ಮಾಡಿದ್ದರ ಬಗ್ಗೆ ಕೇಳಿದಾಗ, "ಬೆಳಗಾವಿ ಜಿಲ್ಲೆಯ ಒಂದಷ್ಟು ನೀರಾವರಿ ಯೋಜನೆಗಳನ್ನು ಚರ್ಚೆ ನಡೆಸಲು ಭೇಟಿ ಮಾಡಿದ್ದರು"ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News