‘ನನಗೆ ಕ್ಯಾನ್ಸರ್ ಇದೆ, ವಿಚಾರಣೆ ಹಾಜರಿಗೆ ಕಾಲಾವಕಾಶ ನೀಡಿʼ : ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿದ ಚಂದ್ರಶೇಖನಾಥ ಸ್ವಾಮೀಜಿ
Chandrasekharnath Swamiji
ಬೆಂಗಳೂರು: ನಾನು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ವೈದ್ಯರು 10 ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತಮಗೆ ಕಾಲಾವಕಾಶ ನೀಡುವಂತೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ.
ವಿವಾದಿತ ಹೇಳಿಕೆ ಪ್ರಕರಣ ಕುರಿತು ಸೋಮವಾರ ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರ ಮುಂದೆ ವಿಚಾರಣೆಗೆ ಗೈರಾಗಿರುವ ಕುರಿತು ಮನವಿ ಪತ್ರ ಸಲ್ಲಿಸಿರುವ ಅವರು, ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದು ಬಾಯಿತಪ್ಪಿ ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, ಸಾಮಾಜಿಕ ಸ್ವಾಸ್ಥ್ಯ ಮತ್ತು ಶಾಂತಿಯ ದೃಷ್ಠಿಯಿಂದ ಈ ಪ್ರಕರಣ ಇಲ್ಲಿಗೆ ಮುಕ್ತಾಯಗೊಳಿಸುವಂತೆ ಕೋರಿದ್ದಾರೆ.
ಪತ್ರದಲ್ಲಿ ಏನಿದೆ?: ನಾನು 81 ವರ್ಷದ ವೃದ್ಧನಾಗಿದ್ದು, ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ಸುಮಾರು ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಆದ ಕಾರಣ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ಒಂದು ವೇಳೆ ಗುಣಮುಖನಾದರೆ ಡಿ.18ರಂದು ಮಧ್ಯಾಹ್ನ 3 ಗಂಟೆಗೆ ಹಾಜರಾಗುತ್ತೇನೆ. ಅನಾನುಕೂಲವಾದಲ್ಲಿ ತನಿಖಾಧಿಕಾರಿಗಳೇ ಮಠಕ್ಕೆ ಬಂದು ಹೇಳಿಕೆ ದಾಖಲಿಸಬಹುದು. ಈ ಬಗ್ಗೆ ನಮ್ಮ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.