ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನ ನೀಡಬೇಕು : ಸಿಎಂ ಡಿ.ಕೆ.ಶಿವಕುಮಾರ್

ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ವತಿಯಿಂದ ‘ಸಂವಾದ ಸಮ್ಮೇಳನ’ ಕಾರ್ಯಕ್ರಮ

Update: 2026-08-21 18:05 IST

ಬೆಂಗಳೂರು : ಹಣಕಾಸಿನ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಸಲಹೆ ಹಾಗೂ ಆದಾಯ ಸಂಗ್ರಹ ಹೆಚ್ಚಳಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೋರಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ‘ಸಂವಾದ ಸಮ್ಮೇಳನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರಕಾರ ತೆರೆದ ಪುಸ್ತಕ. ಹೊಸ ವಿಚಾರ, ಪರಿಹಾರಕ್ಕೆ ನಾವು ಮುಕ್ತರಾಗಿದ್ದೇವೆ. ನಮ್ಮ ತಪ್ಪುಗಳು, ಸಂಪನ್ಮೂಲ ಸೋರಿಕೆ ತಡೆಗಟ್ಟಲು ನಿಮ್ಮ ಸಲಹೆಗಳನ್ನು ನೀಡಿ ಎಂದರು.

ನೀವು ನಂಬಿಕೆಯ ರಕ್ಷಕರು. ನಂಬಿಕೆ ಎಂಬುದು ನಿಮ್ಮ ರಕ್ತದಲ್ಲೇ ಬಂದಿದ್ದು, ನೀವು ಅದನ್ನು ಉಳಿಸಿಕೊಳ್ಳಬೇಕು. ನೀವು ಹೇಳಿದ್ದನ್ನು ನಾವು ನಂಬುತ್ತೇವೆ. ನೀವು ನಮ್ಮ ಬದುಕು, ಆಸ್ತಿ ರಕ್ಷಿಸಿ ಆದಾಯಕ್ಕೆ ಮಾರ್ಗದರ್ಶನ ನೀಡಬೇಕು. ನಮ್ಮ ತಪ್ಪುಗಳನ್ನು ನಿವಾರಣೆ ಮಾಡುವ ಸಾಮಾಥ್ರ್ಯ ನಿಮಗಿದೆ. ನೀವು ದೇಶ ಕಟ್ಟುತ್ತಿದ್ದು, ನಿಮ್ಮ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿ ಕುಗ್ಗಿಸುತ್ತಾರೆ. ಯಾರು ಕಳ್ಳತನ ಮಾಡುತ್ತಾರೆ ಅವರಿಗೆ ಪ್ರಶ್ನೆ ಮಾಡುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ದೇಶದಲ್ಲಿ 12 ಲಕ್ಷ ಉದ್ಯಮಿಗಳು ಈ ದೇಶವನ್ನು ತ್ಯಜಿಸಿದ್ದಾರೆ. ಐಟಿ, ಇಡಿ, ಸಿಬಿಐ ಸಹವಾಸ ಸಾಕು ಎಂದು ಹೋಗುತ್ತಿದ್ದಾರೆ. ತೊಂದರೆ ಕೊಡುವುದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೆಲಸ. ಕೆಲವು ವರ್ಷಗಳ ಹಿಂದೆ ಗುಜರಾತ್‍ಗೆ ಹೋಗಿದ್ದಾಗ ಅಲ್ಲಿ ಶೇ.70ರಷ್ಟು ನಗದಿನಲ್ಲೇ ನಡೆಯುತ್ತಿದೆ. ಕೇವಲ ಶೇ.30 ಮಾತ್ರ ವೈಟ್ ಅಲ್ಲಿ ನಡೆಯುತ್ತಿದೆ. ನಮ್ಮ ಕರ್ನಾಟಕದಲ್ಲಿ ಶೇ.90 ವೈಟ್ ಮೂಲಕ ವ್ಯವಹಾರಗಳು ನಡೆಯುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಶಿಸ್ತುಬದ್ಧರಾಗಿದ್ದೇವೆ ಎಂದು ಹೇಳಿದರು.

ಬಿಜೆಪಿ ಸ್ನೇಹಿತರಿಗೆ ನನ್ನನ್ನು ಹಾಗೂ ನನ್ನ ಸರಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಆಲೋಚನೆಗಳು ಸ್ಪಷ್ಟವಾಗಿದ್ದು, ನಮ್ಮ ಸರಕಾರ ಜನಸಾಮಾನ್ಯರ ವಿಚಾರದಲ್ಲಿ ಕೈಗೊಳ್ಳುತ್ತಿರುವ ನೀತಿಗಳಿಂದಾಗಿ ಅವರಿಗೆ ನನ್ನ ವಿರುದ್ಧ ಹೋರಾಟ ಮಾಡಲು ಯಾವುದೇ ಅವಕಾಶಗಳಿಲ್ಲ. ಅಸೂಯೆಗೆ ಮದ್ದಿಲ್ಲ. ಹೀಗಾಗಿ ಅವರು ನಮಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಶಿವಕುಮಾರ್ ನುಡಿದರು.

ಜಾಗದ ವಿಚಾರ ಬಗೆಹರಿಸುತ್ತೇನೆ: ನಿಮ್ಮವರು ಸಂಸ್ಥೆ (ಐಸಿಎಐ)ಗೆ ಜಾಗದ ಅಗತ್ಯತೆ ಬಗ್ಗೆ ವಿಚಾರ ಪ್ರಸ್ತಾಪ ಮಾಡಿದ್ದೀರಿ. ಅಧಿವೇಶನ ಮುಗಿದ ಬಳಿಕ ಮುಂದಿನವಾರ ಬಂದು ನನ್ನನ್ನು ಭೇಟಿ ಮಾಡಿ. ನಿಮ್ಮ ಬೇಡಿಕೆ ರಾಜ್ಯ ಹಾಗೂ ಹೊಸ ಪೀಳಿಗೆ ಪರವಾಗಿದೆ. ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ನಮ್ಮ ಸರಕಾರಕ್ಕೂ ನೀವು ಸಲಹೆ ನೀಡಿ. ನಮ್ಮ ಸರಕಾರ 52 ಸಾವಿರ ಕೋಟಿ ರೂ. ಪ್ರತಿ ವರ್ಷ ಗ್ಯಾರಂಟಿ ಯೋಜನೆಗೆ ವೆಚ್ಚವಾಗುತ್ತಿದೆ. 20 ಸಾವಿರ ಕೋಟಿ ರೂ. ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಬೇರೆ ಬೇರೆ ಪಿಂಚಣಿ ನೀಡುತ್ತಿದ್ದೇವೆ. ವ್ಯಾಪಾರ ಉದ್ಯಮಕ್ಕೆ ತೊಂದರೆ ಆಗದಂತೆ ಯಾವ ರೀತಿ ಸರಕಾರದ ಆದಾಯ ಹೆಚ್ಚಳ ಮಾಡಬಹುದೆಂದು ತಿಳಿಸಿ ಎಂದು ಹೇಳಿದರು.

ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿ: ರಾಜ್ಯದಲ್ಲಿ ಸೇವಾ ಕ್ಷೇತ್ರದಲ್ಲಿ ಈಶಾನ್ಯ ರಾಜ್ಯಗಳಿಂದ, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಉತ್ತರ ಭಾರತದ ರಾಜ್ಯಗಳಿಂದ ಕಾರ್ಮಿಕರು ಬರುತ್ತಿದ್ದಾರೆ. ಆಂಧ್ರಪ್ರದೇಶ ವ್ಯಾಪಾರಿಗಳು ಬರುತ್ತಿದ್ದಾರೆ. ನೀವು ಅವರಿಗೆ ಮಾರ್ಗದರ್ಶನ ನೀಡಿ ಹೆಚ್ಚು ಗಳಿಸುವಂತೆ ಮಾಡಿ, ಸರಕಾರಕ್ಕೆ ತೆರಿಗೆ ಪಾವತಿಸುವಂತೆ ಮಾಡಿ. ನೀವೆಲ್ಲರೂ ಸಿಎಸ್‍ಆರ್ ನಿಧಿ ವಿಚಾರದಲ್ಲಿ ಉದ್ಯಮಗಳಿಗೆ ಮಾರ್ಗದರ್ಶನ ನೀಡಬೇಕು. ನಮ್ಮ ಸರಕಾರ ಸಿಎಸ್‍ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಇದಕ್ಕಾಗಿ ನಾವು ಶಿಕ್ಷಣ ನೀತಿ ರೂಪಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೆÇನ್ನಣ್ಣ, ಭಾರತೀಯ ಚಾರ್ಟರ್ ಅಕೌಂಟೆಂಟ್ಸ್ ಅಸೋಸಿಯೇಷನ್ ಬೆಂಗಳೂರು ವಿಭಾಗದ ಅಧ್ಯಕ್ಷೆ ಕವಿತಾ ಪರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News