ಹಳ್ಳಿ ಮಕ್ಕಳಿಗೆ ತಂತ್ರಜ್ಞಾನ ತಲುಪಿಸಿ, ಭವಿಷ್ಯದ ಪೀಳಿಗೆಯನ್ನು ತಯಾರು ಮಾಡುವ ಕಿಯೋನಿಕ್ಸ್ ಪ್ರಯತ್ನ ಸ್ವಾಗತಾರ್ಹ : ಸಿಎಂ ಡಿ.ಕೆ.ಶಿವಕುಮಾರ್
ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ
ಬೆಂಗಳೂರು: “ಕಿಯೋನಿಕ್ಸ್ ಸಂಸ್ಥೆ ಎಐ ಆಧಾರಿತ ಕಿಯೋ ಕಂಪ್ಯೂಟರ್ ಗಳ ಮೂಲಕ ತಂತ್ರಜ್ಞಾನವನ್ನು ಹಳ್ಳಿ ಮಕ್ಕಳಿಗೆ ನೀಡುವ ದೊಡ್ಡ ಪ್ರಯತ್ನಕ್ಕೆ ಮುಂದಾಗಿದೆ. ಭವಿಷ್ಯದ ಮಕ್ಕಳನ್ನು ತಯಾರು ಮಾಡುವ ಚಿಂತನೆಗೆ ಕಿಯೋನಿಕ್ಸ್ ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಂಗಳವಾರ ನಡೆದ ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.
“ಕಿಯೋನಿಕ್ಸ್ ಪಾಲಿಗೆ ಇದೊಂದು ಸುವರ್ಣ ದಿನ. ನಾನು ಶಾಲೆಯಲ್ಲಿ ಓದುವಾಗ ಕಿಯೋನಿಕ್ಸ್ ಆರಂಭವಾಗಿತ್ತು. ಆಗ ವೀರಪ್ಪ ಮೊಯ್ಲಿ ಅವರು ಕೈಗಾರಿಕಾ ಸಚಿವರಾಗಿದ್ದರು, ಎಸ್ ಎಂ ಕೃಷ್ಣ ಅವರು ಉಪ ಸಚಿವರಾಗಿದ್ದರು. ದೇವರಾಜ ಅರಸು ಅವರು ಸಿಎಂ ಆಗಿದ್ದರು. ಅವರುಗಳ ಅಲಂಕರಿಸಿದ ಸ್ಥಾನದಲ್ಲಿ ಇಂದು ನಾನು ಕೂತು ನಿಮ್ಮ ಮುಂದೆ ನಿಂತಿರುವುದು ನನ್ನ ಭಾಗ್ಯ” ಎಂದು ತಿಳಿಸಿದರು.
“ಇತ್ತೀಚೆಗೆ ಕಿಯೋನಿಕ್ಸ್ ಮೂಲಕ ಮಕ್ಕಳಿಗೆ ನೀಡುವ ಕಿಯೋ ಕಂಪ್ಯೂಟರ್ ಅನ್ನು ನನ್ನಿಂದಲೇ ಅನಾವರಣ ಮಾಡಿಸಿದರು. ಇಂದು ನಾವು ಭವಿಷ್ಯ ನಿರ್ಮಾಣ ಮಾಡುವ ಸಂದರ್ಭದಲ್ಲಿದ್ದೇವೆ. ಎಐ ಯುಗದ ಪ್ರವೇಶದಲ್ಲಿದ್ದು, ಕಿಯೋನಿಕ್ಸ್ ಹೊಸ ಸಾಧ್ಯತೆಗಳನ್ನು ಗುರುತಿಸಿ ಕಿಯೋ ಅನ್ನು ತಯಾರಿಸಿದ್ದಾರೆ. ಆ ಮೂಲಕ ಕರ್ನಾಟಕವನ್ನು ಭವಿಷ್ಯಕ್ಕೆ ತಯಾರು ಮಾಡುತ್ತಿದೆ. ದೇವರಾಜ ಅರಸು ಅವರ ಕಾಲದಲ್ಲಿ ಇದನ್ನು ಸ್ಥಾಪಿಸಿದ್ದು, ಇದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ. ತಂತ್ರಜ್ಞಾನ, ವಿಜ್ಞಾನ ಎಂದರೆ ಬೆಂಗಳೂರು” ಎಂದರು.
“ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಸೇವೆ ಒದಗಿಸಲಾಗುತ್ತಿದೆ. ಬೆಂಗಳೂರಿನ ಆಸ್ತಿಗಳ ದಾಖಲೆ ಸರಿಪಡಿಸಲು ಹಾಗೂ ಜನರಿಗೆ ಖಾತಾ ವಿತರಣೆಗೆ ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ದಾಖಲೆ ನೀಡಲು ಸರ್ಕಾರ ಮುಂದಾಗಿದೆ. ಜತೆಗೆ ಮನೆ ಮನೆಗೆ ದಾಖಲೆಗಳನ್ನು ನೀಡಲಾಗುವುದು. ಎಸ್ಐಆರ್ ಮುಗಿದ ಬಳಿಕ ನಗರದ ಸಾರ್ವಜನಿಕರಿಗೆ ಈ ದಾಖಲೆ ವಿತರಣೆ ಆರಂಭಿಸಲಾಗುವುದು ಎಂದರು.
ಬೆಂಗಳೂರಿನ ಜತೆಗೆ ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ, ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು ತೀರ್ಮಾನಿಸಿದ್ದು, ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬೇರೆ ಜಿಲ್ಲೆಗಳಲ್ಲಿ ಉದ್ಯಮಗಳ ಪ್ರಗತಿಗೆ ಮುಂದಾಗಿದ್ದೇವೆ. ಸಮಸ್ಯೆ ಯಾವುದೇ ಆದರೂ ಸಕಾರಾತ್ಮಕವಾಗಿ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು. ಎಐ ತಂತ್ರಜ್ಞಾನ ಬಂದಿದ್ದು, ಎಲ್ಲರಿಗೂ ಇದು ಲಭ್ಯವಾಗುತ್ತಿದೆ. ಕಿಯೋನಿಕ್ಸ್ ಅವರು ಗ್ರಾಮೀಣ ಭಾಗದ ಶಾಲೆಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಈ ತಂತ್ರಜ್ಞಾನ ತಲುಪಿಸುತ್ತಿರುವುದಕ್ಕೆ ಅಭಿನಂದಿಸುತ್ತೇನೆ” ಎಂದು ಹೇಳಿದರು.
ಮಕ್ಕಳಲ್ಲಿ ಕೌಶಲ್ಯ ವೃದ್ಧಿಗೆ ಉದ್ಯಮ ಆಧಾರಿತ ಪಠ್ಯಕ್ರಮಕ್ಕೆ ಆದ್ಯತೆ ನೀಡಲು ಸೂಚನೆ
“ನಮ್ಮಲ್ಲಿ 30 ಸಾವಿರ ಇಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿದೆ. ಇಂಜಿನಿಯರಿಂಗ್ ವ್ಯಾಸಂಗ ಮಾಡಿದವರಿಗೆ ಕಡಿಮೆ ವೇತನ ಸಿಗುತ್ತಿದ್ದು, ಇದನ್ನು ಯಾವ ರೀತಿ ಬಗೆಹರಿಸಬೇಕು ಎಂದು ಆಲೋಚನೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಲು ಅವರ ಪಠ್ಯಕ್ರಮವನ್ನು ಉದ್ಯಮ ಆಧಾರಿತವನ್ನಾಗಿ ಪರಿವರ್ತಿಸಲು ಸೂಚಿಸಿದ್ದೇನೆ. ಕೆಲವು ವಿದೇಶಗಳಲ್ಲಿ ಉದ್ಯೋಗ ನೀಡುವಾಗ ಪದವಿಗಳನ್ನು ಕೇಳುವುದಿಲ್ಲ. ಆ ಉದ್ಯೋಗಕ್ಕೆ ಸೂಕ್ತವಾದ ಕೌಶಲ್ಯವಿದೆಯೇ ಎಂದಷ್ಟೇ ಕೇಳುತ್ತಾರೆ” ಎಂದರು.
“ನಮ್ಮ ಯುವಕರು ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗಬೇಕು. ನಮ್ಮ ಸರ್ಕಾರವು ಉದ್ಯೋಗದಾತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಈ ಸಂಸ್ಥೆ ತಂತ್ರಜ್ಞಾನದ ಪರಂಪರೆಯನ್ನು ಮುಂದುವರಿಸುತ್ತಿದ್ದು, ಭವಿಷ್ಯದಲ್ಲಿ ಜಾಗದ ಅಗತ್ಯ ಇದ್ದರೆ ಹೇಳಿ, ನಮ್ಮ ಸರ್ಕಾರ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವವರು ಬೆಂಗಳೂರು ಹಾಗೂ ದೇಶದ ಪ್ರಗತಿಯ ಅಡಿಪಾಯ. ನಮ್ಮ ಸರ್ಕಾರ ಜನರ ಪರವಾದ ಸರ್ಕಾರ. ನಾವು ಎಲ್ಲಾ ಕ್ಷೇತ್ರಗಳಲ್ಲಿ ನಾಯಕರನ್ನು ತಯಾರು ಮಾಡಲು ಬಯಸುತ್ತೇವೆ. ನಮ್ಮ ಸರ್ಕಾರ ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡಲಿದ್ದು, ನಾವೆಲ್ಲರೂ ಒಟ್ಟಾಗಿ ಕರ್ನಾಟಕದ ಭವಿಷ್ಯವನ್ನು ನಿರ್ಮಾಣ ಮಾಡೋಣ” ಎಂದು ಕರೆ ನೀಡಿದರು.