ಬೆಂಗಳೂರು : ʼವಂದೇ ಮಾತರಂʼ ಗೀತೆಯ ಎರಡು ಚರಣವನ್ನು ಮಾತ್ರ ಹಾಡಲು ನಿರ್ಧರಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಮೂರು ವಾರ ಮುಂದೂಡಿದೆ. ಸರಕಾರದ ಕ್ರಮ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಪಿಐಎಲ್ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು  ನ್ಯಾ.ಅನು ಶಿವರಾಮನ್, ನ್ಯಾ.ಟಿ.ಪಿ.ವಿವೇಕಾನಂದ ಅವರಿದ್ದ ಪೀಠ ಇಂದು ನಡೆಸಿತು.

ಅರ್ಜಿದಾರರ ಪರ ವಕೀಲ ಅಂಗದ್ ಕಾಮತ್ ವಾದ ಮಾಡಿ, ರಾಷ್ಟ್ರ ಗೀತೆ ನಿರ್ಧರಿಸಬೇಕಿರುವುದು ಕೇಂದ್ರವೇ, ರಾಜ್ಯ ಸರ್ಕಾರವೇ. ಕೇಂದ್ರ ಗೃಹ ಇಲಾಖೆ ರಾಷ್ಟ್ರಗೀತೆಯ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಒಂದೇ ಮಾದರಿಯ ರಾಷ್ಟ್ರಗೀತೆ ಇರಬೇಕೆಂದು ನಿರ್ಣಯವಾಗಿದೆ. ರಾಜ್ಯ ಸರ್ಕಾರದ ನಿರ್ಣಯಕ್ಕೆ ಯಾವುದೇ ಸಮರ್ಥನೆಯಿಲ್ಲ. ರಾಷ್ಟ್ರ ಲಾಂಛನದ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ತೀರ್ಮಾನಿಸಬೇಕು. ಪ್ರತಿ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಈ ಬಗ್ಗೆ ತೀರ್ಮಾನಿಸುವಂತಿಲ್ಲ. ರಾಜ್ಯ ಸರ್ಕಾರವು ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಯಾವುದೇ ಇಲಾಖೆ ಪ್ರಸ್ತಾವ ಸಲ್ಲಿಸಿಲ್ಲ. ಈ ವಿಚಾರದ ಚರ್ಚೆಯ ಕುರಿತು ಯಾವುದೇ ಅಜೆಂಡಾ ಇರಲಿಲ್ಲ ಎಂದು ವಾದಿಸಿದ್ದರು.

ನಂತರ ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಾಡಿ, ಇದೇ ವಿಚಾರ ಇಂದು ಸುಪ್ರೀಂ ಕೋರ್ಟ್ ನಲ್ಲಿದೆ. 1932 ರಿಂದ ಎರಡು ಚರಣ ಮಾತ್ರ ಹಾಡಲಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಇದು ಕಡ್ಡಾಯವಲ್ಲ ಎಂದಿದೆ. ರಾಜ್ಯ ಸರ್ಕಾರ ಅದೇಶ ಮಾಡಿರುವುದು ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಮಾತ್ರ. ರಾಷ್ಟ್ರಪತಿ, ಉಪರಾಷ್ಟ್ರಪತಿ ಕಾರ್ಯಕ್ರಮಗಳಿಗೆ ಅಲ್ಲ ಎಂದರು.

ಈ ವೇಳೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌, ಏಪ್ರಿಲ್‌ನಲ್ಲಿ ವಜಾಗೊಂಡಿರುವ ಅರ್ಜಿ ಆದೇಶವನ್ನು ಎಜಿ ಉಲ್ಲೇಖಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಜುಲೈನಲ್ಲಿ ಮತ್ತೊಂದು ನಿರ್ಧಾರ ಕೈಗೊಂಡಿದೆ. ಹಾಲಿ ಪಿಐಎಲ್‌ನಲ್ಲಿ ವಿಚಾರ ಬೇರೆಯದೇ ಇದೆ. ಆಗಸ್ಟ್‌ನಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ (ತಿದ್ದುಪಡಿ) ಕಾಯಿದೆಯ ಸೆಕ್ಷನ್‌ 3ಕ್ಕೆ ತಿದ್ದುಪಡಿಯಾಗಿದೆ. ಎಜಿಯವರು ಆದೇಶ ಮತ್ತು ಪ್ರಾವಿಷನ್‌ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೇಂದ್ರ ಹೇಳಿರುವುದು ಅನುಪಾಲಿಸಬೇಕು ಎಂದು ಹೇಳಿದೆಯೇ ವಿನಾ ಕಡ್ಡಾಯವಲ್ಲ ಎಂದು ಹೇಳಿಲ್ಲ ಎಂದು ವಾದ ಮಂಡಿಸಿದರು.

ಅಂತಿಮವಾಗಿ ಸುಪ್ರಿಂ ಕೋರ್ಟ್ ನಲ್ಲಿ ಪ್ರಕರಣ ಎರಡು ವಾರ ಮುಂದೂಡಿಕೆಯಾಗಿರುವ ಕಾರಣ ಇಲ್ಲಿಯ ಪ್ರಕರಣವನ್ನು ಮೂರು ವಾರ ಮುಂದೂಡಿಕೆ‌ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor