×
Ad

ಕಮಿಷನ್ ಆರೋಪ: ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅಮಾನತು

Update: 2026-02-04 11:18 IST

ಬೆಂಗಳೂರು: ಗುತ್ತಿಗೆ ಬಿಡ್ ಪ್ರಕ್ರಿಯೆಗೆ ಸಂಬಂಧಿಸಿ ಶೇ.3ರಷ್ಟು ಕಮಿಷನ್‌ ಕೇಳಿದ ಆರೋಪ ಎದುರಿಸುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್‌ ಬಿ. ಶೇಗಜಿ ಹಾಗೂ ಸಂಘಟನಾ ಕಾರ್ಯದರ್ಶಿ ಹಣಮಂತ ರಾಯಪ್ಪ ಚಿಂಚಲಿ ಅವರನ್ನು ಸಂಘದಿಂದ ಅಮಾನತು ಮಾಡಲಾಗಿದೆ.

ಗುತ್ತಿಗೆದಾರರೊಂದಿಗೆ ಕಮಿಷನ್‌ ಪಡೆಯುವ ಬಗ್ಗೆ ನಡೆದ ಮಾತುಕತೆಯ ಆಡಿಯೊ ಮತ್ತು ವಿಡಿಯೊಗಳು ಮಂಗಳವಾರ ಬೆಳಿಗ್ಗೆ ಬಹಿರಂಗವಾಗಿದ್ದು, ಅವು ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಸಂಘ ಗಂಭೀರ ನಿರ್ಧಾರ ಕೈಗೊಂಡಿದೆ. ಈ ವಿಷಯವನ್ನು ಚರ್ಚಿಸಲು ಸಂಘ ಮಂಗಳವಾರ ಮಧ್ಯಾಹ್ನ ತುರ್ತು ಸಭೆ ನಡೆಸಿ, ತಕ್ಷಣದಿಂದ ಜಾರಿಗೆ ಬರುವಂತೆ ಇಬ್ಬರ ಅಮಾನತು ಆದೇಶ ಹೊರಡಿಸಿದೆ.

ಸಂಘದ ಧ್ಯೇಯೋದ್ದೇಶ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂಬ ಕಾರಣದಿಂದ ಜಗನ್ನಾಥ್‌ ಮತ್ತು ಹಣಮಂತ ಅವರನ್ನು ನಿರ್ದೇಶಕ ಸ್ಥಾನದಿಂದಲೂ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆಗಾಗಿ ಸಂಘದ ಆರು ಹಿರಿಯ ಸದಸ್ಯರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಎಲ್ಲ 32 ಆಡಳಿತ ಮಂಡಳಿ ಸದಸ್ಯರೊಂದಿಗೆ ದೂರವಾಣಿ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ತಿಳಿಸಿದ್ದಾರೆ.

ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಸುಮಾರು37 ಸಾವಿರ ಕೋಟಿ ರೂ. ಹಣ ಬಿಡುಗಡೆಗೊಳಿಸುವಂತೆ ಸಂಘ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ, ಸಂಘದ ಸದಸ್ಯರೇ ಇಂತಹ ಆರೋಪಕ್ಕೆ ಒಳಗಾಗಿರುವುದು ಆಘಾತಕಾರಿಯಾಗಿದೆ. ಸಂಘದ ಗುತ್ತಿಗೆದಾರರ ಹಿತ ಕಾಪಾಡಲು ನಾವು ಎಂದಿಗೂ ಹೋರಾಟ ಮಾಡುತ್ತೇವೆ. ಇಂತಹ ವಿಷಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News