ಬೆಂಗಳೂರು | ಪತ್ನಿ ಮನೆ ಎದುರು ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಗೆ ತೆರಳಿದ್ದ ಪತ್ನಿ ಬಳಿ ಹೋಗಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಾಗರಭಾವಿಯ ಎನ್‍ಜಿಎಫ್ ಲೇಔಟ್‍ನ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.
ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ ಪತಿ ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಜ್ಞಾನಭಾರತಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
2013ರಲ್ಲಿ ನಯನಾ ಎಂಬಾಕೆಯನ್ನು ಮಂಜುನಾಥ್ ಮದುವೆಯಾಗಿದ್ದು, ದಂಪತಿಗೆ 9 ವರ್ಷದ ಪುತ್ರ ಇದ್ದು, ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದು, ಅದರಂತೆ ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಮಧ್ಯೆ ಪತ್ನಿಯ ಬಳಿ ವಿಚ್ಛೇದನ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಎಂದು ಕೇಳಲು ಎನ್‍ಜಿಎಫ್ ಲೇಔಟ್‍ನಲ್ಲಿರುವ ಪತ್ನಿ ಮನೆಗೆ ತೆರಳಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನಯನಾ ಜತೆಗೆ ಬರಲು ಒಪ್ಪಲಿಲ್ಲ ಎಂದು ಪೆಟ್ರೋಲ್ ತಂದು ಮಂಜುನಾಥ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.