ಬೆಂಗಳೂರು : ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ನಗರಗಳನ್ನೂ ಭವಿಷ್ಯದ ತಂತ್ರಜ್ಞಾನ ಕೇಂದ್ರಗಳನ್ನಾಗಿ ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಐಟಿ,ಬಿಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆದ ಬೆಂಗಳೂರು ಟೆಕ್ ಶೃಂಗಸಭೆ 2026ರ ಎರಡನೆ ದಿನದ ಬುಧವಾರ ಕಾರ್ಯಕ್ರಮದಲ್ಲಿ ಬೆಂಗಳೂರು ನಾವೀನ್ಯತೆ ವರದಿ- 2026 ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪಯಣಕ್ಕೆ ಹೊಸ ದಿಕ್ಕು ನೀಡುವ ಆಶಯವನ್ನು ಬೆಂಗಳೂರು ನಾವೀನ್ಯತೆ ವರದಿ 2026 ವ್ಯಕ್ತಪಡಿಸಿದ್ದು, ಜಾಗತಿಕ ತಂತ್ರಜ್ಞಾನ ಕಂಪನಿಗಳನ್ನು ರಾಜ್ಯದ ವಿವಿಧ ನಗರಗಳಿಗೆ ಆಕರ್ಷಿಸುವ ಮೂಲಕ, ಬೆಂಗಳೂರು ಮಾತ್ರವಲ್ಲದೆ ಕಲಬುರಗಿ, ಹುಬ್ಬಳ್ಳಿ ಮತ್ತು ಮಂಗಳೂರಿನಂತಹ ನಗರಗಳನ್ನೂ ಭವಿಷ್ಯದ ತಂತ್ರಜ್ಞಾನ ಕೇಂದ್ರಗಳನ್ನಾಗಿ ರೂಪಿಸುವ ಗುರಿಯನ್ನು ಇದು ಹೊಂದಿದೆ ಎಂದರು.

ಕರ್ನಾಟಕದ ಉದ್ಯಮಶೀಲರು ಈವರೆಗೆ ಸಾಧಿಸಿರುವ ಪ್ರಗತಿ ಮತ್ತು ಮುಂದಿನ ದಿನಗಳಲ್ಲಿ ಅವರು ಸಾಧಿಸಬಹುದಾದ ಬೆಳವಣಿಗೆಯ ಚಿತ್ರಣವನ್ನು ಬೆಂಗಳೂರು ನಾವೀನ್ಯತೆ ವರದಿ 2026 ನೀಡುತ್ತದೆ. ಈಗ ನಮ್ಮ ಮುಂದಿರುವ ಪ್ರಮುಖ ಕೆಲಸವೆಂದರೆ, ಜಾಗತಿಕ ಮಟ್ಟದ ಎಐ, ಕ್ವಾಂಟಮ್ ಅಥವಾ ಸೆಮಿಕಂಡಕ್ಟರ್ ಕಂಪನಿಗಳು ಕಲಬುರಗಿ, ಹುಬ್ಬಳ್ಳಿ ಅಥವಾ ಮಂಗಳೂರಿನಲ್ಲಿಯೂ ಯಶಸ್ವಿಯಾಗಿ ಬೆಳೆಯಲು ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸುವುದು. ಡೀಪ್‍ಟೆಕ್ ಕ್ಷೇತ್ರದಲ್ಲಿ ತಾಳ್ಮೆ ಮತ್ತು ದೀರ್ಘಾವಧಿಯ ಬದ್ಧತೆ ಅಗತ್ಯ. ಕರ್ನಾಟಕ ಈ ದಾರಿಯಲ್ಲಿ ನಿರಂತರವಾಗಿ ಮುನ್ನಡೆಯಲಿದೆ ಎಂದು ಹೇಳಿದರು.

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್. ಅವರು ಮಾತನಾಡಿ, ಎಲೆವೇಟ್ ಅನುದಾನದಿಂದ ಹಿಡಿದು ಉತ್ಕೃ ಷ್ಟತಾ ಕೇಂದ್ರಗಳ ಸ್ಥಾಪನೆ ಮತ್ತು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರಗಳವರೆಗೆ, ಈ ವರದಿಯ ಪ್ರತಿಯೊಂದು ಅಂಕಿ-ಅಂಶವೂ ಹಲವು ವರ್ಷಗಳ ನಿರಂತರ ಪ್ರಯತ್ನದ ಫಲಿತಾಂಶವನ್ನು ಪ್ರತಿಬಿಂಬಿಸುತ್ತದೆ. ಎಲೆವೇಟ್ ಕಾರ್ಯಕ್ರಮದಡಿ 1,479 ಸ್ಟಾರ್ಟ್‍ಅಪ್‍ಗಳಿಗೆ ನೆರವು ನೀಡಲಾಗಿದೆ. ನಮ್ಮ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳ ಸ್ಟಾರ್ಟ್‍ಅಪ್‍ಗಳು ಈ ಕಾರ್ಯಕ್ರಮದಲ್ಲಿ ಯಶಸ್ಸು ಸಾಧಿಸಿವೆ. ಆರಂಭಿಕ ಹಂತದಲ್ಲಿ ನೀಡುವ ನೆರವನ್ನು ದೊಡ್ಡ ಮಟ್ಟದ ಉದ್ಯಮ ಬೆಳವಣಿಗೆಯಾಗಿ ಪರಿವರ್ತಿಸುವುದು ಈಗ ಇಲಾಖೆಯ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಸರಕಾರವೇ ಮೊದಲ ಗ್ರಾಹಕನಾಗಿ ಕಾರ್ಯನಿರ್ವಹಿಸುವುದು, ಡೀಪ್‍ಟೆಕ್ ಕ್ಷೇತ್ರಕ್ಕೆ ದೀರ್ಘಾವಧಿಯ ಹೂಡಿಕೆ ಬಂಡವಾಳ ಒದಗಿಸುವುದು ಹಾಗೂ ಸಂಶೋಧನಾ ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ಮಾರುಕಟ್ಟೆಗೆ ತಲುಪಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು ಅವರು ಮಾತನಾಡಿ, ಬೆಂಗಳೂರು ನಾವೀನ್ಯತೆ ವರದಿಯು ಹೂಡಿಕೆದಾರರು, ಜಾಗತಿಕ ಸಾಮಥ್ರ್ಯ ಕೇಂದ್ರಗಳು (ಜಿಸಿಸಿ) ಮತ್ತು ಉದ್ಯಮ ಸಂಸ್ಥಾಪಕರಿಗೆ, ಇತರ ಉದ್ಯಮ ಸಮೂಹಗಳವರೆಗೆ ಕರ್ನಾಟಕದಲ್ಲಿರುವ ಅವಕಾಶಗಳ ಬಗ್ಗೆ ದತ್ತಾಂಶ ಆಧಾರಿತ ಸಮಗ್ರ ಚಿತ್ರಣ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಟಾರ್ಟ್‍ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

2ನೇ ಸ್ತರದ ನಗರಗಳಿಗೂ ಸ್ಟಾರ್ಟ್ ಅಪ್ ಗಳ ವಿಸ್ತರಣೆ

ಇಂದು ಅತಿವೇಗದ ಅಂತರ್ಜಾಲ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ನೆರವಿನಿಂದ ಚಿಕ್ಕ ಪಟ್ಟಣಗಳೂ ಸ್ಟಾರ್ಟ್ ಅಪ್ ಆಕರ್ಷಕ ಕೇಂದ್ರಗಳಾಗಲು ಸಾಧ್ಯವಿದೆ. ಆದರೆ ಸಂಪರ್ಕ, ವಿದ್ಯುತ್ ಮಂತಾದ ಮೂಲಸೌಕರ್ಯಗಳ ಲಭ್ಯತೆ ಅತ್ಯಗತ್ಯ. ಮಂದಿನ 5 ವರ್ಷಗಳಲ್ಲಿ ಸ್ಟಾರ್ಟ್ ಅಪ್ ವಲಯದಲ್ಲಿ ಮಹತ್ತರ ಪರಿವರ್ತನೆಯಾಗಲಿದ್ದು, ಭಾರತಕ್ಕೆ, ಅದರಲ್ಲೂ 2 ಮತ್ತು 3ನೆ ಸ್ತರದ ನಗರಗಳಿಗೆ ಹೆಚ್ಚಿನ ಅವಕಾಶಗಳಿವೆ . ತಂತ್ರಜ್ಞಾನ ಉದ್ಯಮ 1ನೆ ಸ್ತರದ ಅಥವಾ 2, 3ನೇ ಸ್ತರದ ನಗರಗಳ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂದು ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ ಕೇಂದ್ರ ಕಚೇರಿ ನಿರ್ದೇಶಕ ರಾಕೇಶ್ ದುಬೆ ಸಂವಾದಲ್ಲಿ ಉಲ್ಲೇಖಿಸಿದರು.

ಟೆಕ್ ಮೇಳದಲ್ಲಿ ಶುದ್ಧ ವಿಜ್ಞಾನದ ಸೆಳೆತ!

ಬಾಹ್ಯಾಕಾಶ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದು ಬಂದಿರುವ ಹಾದಿ ಹಾಗೂ ಈ ವಲಯಗಳಿಗೆ ಸರಕಾರ ನೀಡುತ್ತಿರುವ ಉತ್ತೇಜನ, ಪ್ರೋ ತ್ಸಾಹಗಳ ಕುರಿತು ಈ ಮಳಿಗೆಯಲ್ಲಿ ವಿವರ ನೀಡುವ ಮೂಲಕ ರಾಜ್ಯ ಸರಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನಾ ಸಂಸ್ಥೆ ಪ್ರದರ್ಶನ ಮಳಿಗೆ ಟೆಕ್ ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ಗಮನ ಸೆಳೆದಿದೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ಪ್ರಾಯೋಗಿಕವಾಗಿ ವೈಜ್ಞಾನಿಕ ಸಿದ್ಧಾಂತಗಳನ್ನು ಅರಿಯಲು ರಾಜ್ಯದ ವಿವಿಧ ಪ್ರೌಢಶಾಲೆಗಳಲ್ಲಿ 31 ಕಿರಿಯ ವೈಜ್ಞಾನಿಕ ಸಂಪನ್ಮೂಲ ಕೇಂದ್ರಗಳನ್ನು ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ವೈಜ್ಞಾನಿಕ ಪರಿಕರಗಳೊಂದಿಗೆ ಪ್ರಯೋಗಾಲಯ ನಿರ್ಮಿಸಲಾಗಿದ್ದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಪಠ್ಯಕ್ರಮ ಆಧಾರಿತ ಪ್ರಯೋಗಗಳನ್ನು ನಡೆಸಲಾಗುತ್ತದೆ. ಇಲ್ಲಿ ಕಿಟ್ ಗಳ ಬಳಕೆ ಮೂಲಕ ವಿದ್ಯಾರ್ಥಿಗಳು ಸ್ವತಃ ಪ್ರಯೋಗ ನಡೆಸುವುದರಿಂದ ವಿಜ್ಞಾನದ ಮೂಲಭೂತ ತತ್ವಗಳನ್ನು ತಿಳಿಯಲು ಸಹಾಯಕವಾಗಿವೆ.

ಚಂದ್ರಯಾನ ಯೋಜನೆ ಸೇರಿದಂತೆ ವಿವಿಧ ಬಾಹ್ಯಾಕಾಶ ಯೋಜನೆಗಳಲ್ಲಿ ಇಸ್ರೋ ಸಂಸ್ಥೆ ಹಾಗೂ ಕರ್ನಾಟಕದ ವಿಜ್ಞಾನಿಗಳ ಕೊಡುಗೆಯ ಬಗ್ಗೆಯೂ ಇಲ್ಲಿ ವಿವರಗಳಿವೆ. ಒಟ್ಟಾರೆ ಯುವಜನರಲ್ಲಿ ವಿಜ್ಞಾನದ ಕುತೂಹಲ ತಣಿಸುವ ಪ್ರದರ್ಶನ ಕೇಂದ್ರ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor